ಮಡಿಕೇರಿ, ಸೆ. 7: ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯುಂಟಾಗಿದ್ದು, ಬಹುತೇಕ ರಸ್ತೆಗಳು ಕೊಚ್ಚಿ ಹೋಗಿರುವದರಿಂದ ಹಾಗೂ ಮೂಲಭೂತ ಸೌಲಭ್ಯಗಳು ಪುನರ್ ನಿರ್ಮಾಣ ಆಗದೇ ಇರುವದರಿಂದ ಪ್ರವಾಸಿಗರಿಗೆ ಜಿಲ್ಲೆಗೆ ಭೇಟಿ ನೀಡದಂತೆ ವಿಧಿಸಲಾಗಿದ್ದ ನಿರ್ಬಂಧವನ್ನು ಮುಂದುವರೆಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿಂದು ಸಂಜೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಅದರಂತೆ ತಾ. 9ರವರೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಮುಂದುವರೆಸದಂತೆ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಕೆಲವೊಂದು ಪ್ರದೇಶಗಳಾದ ಅಬ್ಬಿಪಾಲ್ಸ್, ಮಾಂದಲ್‍ಪಟ್ಟಿ, ತಡಿಯಂಡಮೋಳ್ ಸೇರಿದಂತೆ ಮಂಗಳೂರು ರಸ್ತೆ ಹಾಗೂ ಸೋಮವಾರಪೇಟೆ ರಸ್ತೆಗಳಿಗೆ ಯಾವದೇ ಕಾರಣಕ್ಕೂ ಪ್ರವೇಶ ನೀಡದಂತೆ ತೀರ್ಮಾನಿಸಲಾಗಿದೆ. ಈ ಕುರಿತ ಆದೇಶ ತಾ. 8ರಂದು (ಇಂದು) ಬರಲಿರುವದಾಗಿ ತಿಳಿದುಬಂದಿದೆ.

ಬೆಳಿಗ್ಗೆ ಭೇಟಿ

ಇಂದು ಬೆಳಿಗ್ಗೆ ಕೊಡಗು ಜಿಲ್ಲಾ ರೆಸಾಟ್ರ್ಸ್, ಹೊಟೇಲ್ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಾ. 9ರ ನಂತರ ಪ್ರವಾಸೋದ್ಯಮವನ್ನು ನಿಷೇದಿಸದಂತೆ ಮನವಿ ಮಾಡಲಾಯಿತು.

ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಉಪಾಧ್ಯಕ್ಷ ಜಹೀರ್ ಅಹಮದ್, ಖಜಾಂಚಿ ಭಾಸ್ಕರ್ ಕೆ.ಕೆ., ನಿರ್ದೇಶಕರುಗಳಾದ ಮಹಮ್ಮದ್ ಆಸೀಫ್, ಜೆ.ವಿ. ಕೋಠಿ, ಸಿದ್ದು, ಮೋಹನ್‍ದಾಸ್ ಬಶೀರ್, ಕಿರಣ್, ಪ್ರವಾಸೋದ್ಯಮ ಕ್ಷೇತ್ರದ ಸತ್ಯ, ಅಂಬೆಕಲ್ ನವೀನ್ ಪಾಲ್ಗೊಂಡಿದ್ದರು.