ಕುಶಾಲನಗರ, ಸೆ. 7: ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಲ್ಲಿ ಆಸ್ತಿಪಾಸ್ತಿ ನಷ್ಟದೊಂದಿಗೆ ನೂರಾರು ಕುಟುಂಬಗಳು ರಕ್ಷಣೆ ಕೋರಿ ಪರಿಹಾರ ಕೇಂದ್ರ ಹಾಗೂ ಪರ್ಯಾಯ ವ್ಯವಸ್ಥೆಗಳಲ್ಲಿ ಆಶ್ರಯ ಪಡೆಯುತ್ತಿದ್ದರೆ ಹಲವೆಡೆ ಮೂಕಪ್ರಾಣಿಗಳ ರೋದನ ಕೇಳುವವರೇ ಇಲ್ಲದಾಗಿತ್ತು.

ತಡರಾತ್ರಿಯಲ್ಲಿ ಮನೆಯನ್ನು ಬಿಟ್ಟು ಓಡಿ ಬಂದ ಜನರು ತಮ್ಮ ರಕ್ಷಣೆಯಲ್ಲಿ ತೊಡಗಿದ್ದರೆ ಅತ್ತ ಜಾನುವಾರುಗಳು, ಸಾಕು ಪ್ರಾಣಿಗಳು ಮಾತ್ರ ದಿಕ್ಕು ದಿಸೆಯಿಲ್ಲದೆ ಕೆಲವೊಂದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರೆ ಇನ್ನು ಕೆಲವು ಕಡೆ ಆಹಾರವಿಲ್ಲದೆ ಸೊರಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಜಾನುವಾರುಗಳ ಮಾಲೀಕರು ಅವುಗಳನ್ನು ರಸ್ತೆ ಬದಿಯಲ್ಲಿ, ಸ್ನೇಹಿತರ ಮನೆ ಆಶ್ರಯದಲ್ಲಿ ಇರಿಸಿ ತಮ್ಮ ಜೀವ ಉಳಿಸಿಕೊಳ್ಳುವ ಪರಿಸ್ಥಿತಿ ಎಲ್ಲೆಡೆಯದ್ದಾಗಿತ್ತು.

ಈ ಸಂದರ್ಭ ಅವರ ಸಹಾಯಕ್ಕೆ ಅಂತರ್ರಾಷ್ಟ್ರೀಯ ಪ್ರಾಣಿ ದಯಾ ಸಂಘಗಳ ಪ್ರತಿನಿಧಿಗಳು ಸ್ಥಳೀಯರ ಆಶ್ರಯದೊಂದಿಗೆ ಕೈಜೋಡಿಸಿದ್ದು ನಿಜಕ್ಕೂ ಶ್ಲಾಘನೀಯ ಎನ್ನಬಹುದು. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೆಟ್ಟ ಗುಡ್ಡಗಳ ನಡುವೆ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದ ಹತ್ತಾರು ಜಾನುವಾರುಗಳು, ಸಾಕು ಪ್ರಾಣಿಗಳನ್ನು ರಕ್ಷಿಸಿ ಹೊರ ತರುವಲ್ಲಿ ಅಂತರಾಷ್ಟ್ರೀಯ ಪ್ರಾಣಿ ದಯಾ ಸಂಸ್ಥೆಗಳಾದ ಕ್ಯೂಪ ಸಂಸ್ಥೆ, ಪೀಪಲ್ ಫಾರ್ ಎನಿಮಲ್ಸ್ ಸಂಘಟನೆಗಳ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಜಾನುವಾರುಗಳ ನೆರವಿಗೆ ಬಂದಿದ್ದು ನಿಜಕ್ಕೂ ಎಲ್ಲರೂ ಮೆಚ್ಚುವಂತಹ ಕಾರ್ಯವಾಗಿದೆ.

ಜಾನುವಾರುಗಳ ಹಾಗೂ ಸಾಕು ಪ್ರಾಣಿಗಳ ರಕ್ಷಣೆ ಮಾಡುವದರೊಂದಿಗೆ ಅವುಗಳಿಗೆ ತುರ್ತು ಚಿಕಿತ್ಸೆ ಮತ್ತು ಆಹಾರ ನೀಡಿ ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಗಿರಗೂರಿನಲ್ಲಿರುವ ಬೋಟಾ ಫಾರಂ ನಲ್ಲಿ ಅಶ್ರಯ ಕಲ್ಪಿಸುವಲ್ಲಿ ಈ ತಂಡದ ಸದಸ್ಯರುಗಳು ಯಶಸ್ವಿಯಾಗಿದ್ದಾರೆ. ಬೋಟಾ ಫಾರಂನ ಮಾಲೀಕ ಎಸ್.ಎಂ.ಅಶ್ರಫ್ ಮತ್ತು ಜಕ್ರಿಯ ಅಶ್ರಫ್ ದಂಪತಿ ಈ ಸಂದರ್ಭ ತಮ್ಮ ಆವರಣದಲ್ಲಿ 20 ಕ್ಕೂ ಅಧಿಕ ಜಾನುವಾರುಗಳಿಗೆ ಆಶ್ರಯ ಕಲ್ಪಿಸುವಲ್ಲಿ ತಂಡದ ಸದಸ್ಯರೊಂದಿಗೆ ಕೈಜೋಡಿಸಿದ್ದಾರೆ. ಸಿಂಗಾಪುರದಲ್ಲಿ ನೆಲೆಸಿರುವ ಕೊಡಗು ಮೂಲದ ಯುವತಿ ಶಿಲ್ಪ ಮತ್ತು ಸರಕಾರೇತರ ಸಂಸ್ಥೆಗಳ ಸ್ವಯಂ ಸೇವಕರ ತಂಡ ಪ್ರಾಣಿಗಳ ರಕ್ಷಣೆಗೆ ಒತ್ತು ನೀಡಿ ವಾರಗಳ ಕಾಲ ಜಿಲ್ಲೆಯಲ್ಲಿ ಸಂಚರಿಸಿ ಹಲವು ಪ್ರಾಣಿಗಳ ಪ್ರಾಣ ಉಳಿಸಿದ್ದಾರೆ.

ಕ್ಯೂಪ ಸಂಸ್ಥೆಯ ಪ್ರತಿನಿಧಿಗಳಾದ ರೋಹನ್ ಅಪ್ಪಯ್ಯ, ಡಾ.ಮೇಘನ ಸೇರಿದಂತೆ ವಿವಿಧೆಡೆಯ ಪ್ರಾಣಿ ಪ್ರಿಯರ ತಂಡ ವಿವಿಧ ತಳಿಯ ಜಾನುವಾರುಗಳನ್ನು ರಕ್ಷಿಸಿ ಬೋಟಾ ಫಾರಂನ ಪ್ರಾಣಿಗಳ ಆಶ್ರಯ ಕೇಂದ್ರಗಳಿಗೆ ತಲುಪಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಆಶ್ರಫ್ ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ತಿಳಿಸಿದ್ದಾರೆ. ಆಗಸ್ಟ್ 18 ರಿಂದ ಬೋಟಾ ಫಾರಂನಲ್ಲಿ ಜಾನುವಾರುಗಳ ಆರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ. ಕೆಲವು ದನಗಳು ಗರ್ಭಾವಸ್ಥೆಯಲ್ಲಿದ್ದು ಅವುಗಳನ್ನು ಸೂಕ್ಷವಾಗಿ ಗಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಾನುವಾರುಗಳಿಗೆ ಆಹಾರ ನೀಡುವದರೊಂದಿಗೆ ಉಚಿತ ಚಿಕಿತ್ಸೆ ಹಾಗೂ ಅವುಗಳ ನಿರ್ವಹಣೆಗಾಗಿ ಮೂರು ಕಾರ್ಮಿಕರನ್ನು ನಿಯೋಜಿಸಲಾಗಿದೆ. ಪ್ರಕೃತಿ ವಿಕೋಪಕ್ಕೆ ಒಳಗಾದ ಮೊಣ್ಣಂಗೇರಿ, ಹಟ್ಟಿಹೊಳೆ, ಮಕ್ಕಂದೂರು, ಮಡಿಕೇರಿ, ಕಾಲೂರು, ಮದೆನಾಡು ವ್ಯಾಪ್ತಿಯಿಂದ ಜಾನುವಾರುಗಳನ್ನು ರಕ್ಷಿಸಲಾಗಿದೆ ಎಂದು ಅವರು ವಿವರ ನೀಡಿದ್ದಾರೆ. ಇವುಗಳಲ್ಲಿ ಒಂದು ದನ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಬಹುತೇಕ ಜಾನುವಾರುಗಳ ಮಾಲೀಕರ ಮಾಹಿತಿ ಕೂಡ ದೊರಕಿಲ್ಲ. ಸಂಘಸಂಸ್ಥೆಗಳ ಪ್ರತಿನಿಧಿಗಳ ಕಾರ್ಯ ಮಾತ್ರ ಶ್ಲಾಘನೀಯವಾದುದು ಎಂದು ಜಕ್ರಿಯ ಅಶ್ರಫ್ ತಿಳಿಸಿದ್ದಾರೆ.

ಈ ಸಂದರ್ಭ ಜಾನುವಾರುಗಳಿಗೆ ಅವಶ್ಯಕತೆಯಿರುವ ಹುಲ್ಲು ಮತ್ತಿತರ ಸಾಮಗ್ರಿಗಳಿಗೆ ಬೆಂಗಳೂರಿನ ಐಟಿ ಸಂಸ್ಥೆಗಳ ಯುವಕರ ತಂಡ ಸಂಗ್ರಹಿಸಿ ತಮ್ಮ ಜೀಪ್‍ಗಳಲ್ಲಿ ತಂದು ನೀಡಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಆಶ್ರಯ ಕೇಂದ್ರದಲ್ಲಿರುವ ದನಗಳ ಮಾಲೀಕರು ಬಂದಲ್ಲಿ ಅವುಗಳನ್ನು ಹಿಂತಿರುಗಿಸುವದಾಗಿ ಅಶ್ರಫ್ ತಿಳಿಸಿದ್ದು ಅನಾಥ ದನಗಳಲ್ಲಿ ಕೆಲವು ದನಗಳು ಹಾಲು ನೀಡುತ್ತಿದ್ದು ಅದರಲ್ಲಿ ಬರುವ ಆದಾಯವನ್ನು ಕೂಡ ಕಲೆಹಾಕಿ ಮಾಲೀಕರಿಗೆ ನೀಡಲಾಗುವದು. ಈ ಬಗ್ಗೆ ತಮ್ಮನ್ನು ಮೊಬೈಲ್ ಸಂಖ್ಯೆ 9845253646 ಸಂಪರ್ಕಿಸುವಂತೆ ಕೋರಿದ್ದಾರೆ. ಜಾನುವಾರುಗಳ ಚಿಕಿತ್ಸೆಗೆ ಬೆಂಗಳೂರಿನ ಪಶು ತಜ್ಞ ಡಾ.ಶಂತನು ಅವರ ತಂಡ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಸುಮಾರು 30 ಕ್ಕೂ ಅಧಿಕ ವಿವಿಧ ತಳಿಗಳ ಶ್ವಾನಗಳನ್ನು ಬೈಲುಕೊಪ್ಪೆಯ ಮೈಸೂರು ಹೆದ್ದಾರಿ ಒತ್ತಿನಲ್ಲಿರುವ ಗೆಲುಪ ಬೌದ್ದ ವಿಶ್ವವಿದ್ಯಾಲಯದ ಆವರಣದಲ್ಲಿ ಸಲಹಲಾಗುತ್ತಿದ್ದು ಈ ಶ್ವಾನಗಳನ್ನು ದತ್ತು ತೆಗೆದುಕೊಳ್ಳುವ ಆಸಕ್ತಿ ಉಳ್ಳವರು ಮೊ. 9740109944 ಸಂಪರ್ಕಿಸುವಂತೆ ಕ್ಯೂಪ ಪ್ರತಿನಿಧಿ ರೋಹನ್ ಅಪ್ಪಯ್ಯ ‘ಶಕ್ತಿ’ ಮೂಲಕ ಕೋರಿದ್ದಾರೆ.

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮಾಲೀಕರಿಂದ ತಪ್ಪಿಸಿಕೊಂಡು ಅನಾಥವಾಗಿರುವ ಜಾನುವಾರುಗಳನ್ನು ಬೋಟಾ ಫಾರಂ ಪ್ರಾಣಿಗಳ ಆಶ್ರಯ ಕೇಂದ್ರಕ್ಕೆ ತಲುಪಿಸಿದಲ್ಲಿ ಅವುಗಳನ್ನು ಆರೈಕೆ ಮಾಡಿ ನಂತರ ಹಿಂತಿರುಗಿಸಲಾಗುವದು ಎಂದು ಅಶ್ರಫ್ ಮನವಿ ಮಾಡಿದ್ದಾರೆ.

-ವರದಿ:ಚಂದ್ರಮೋಹನ್