ಶನಿವಾರಸಂತೆ, ಸೆ. 7: ಶನಿವಾರಸಂತೆ, ಚಿನ್ನಳ್ಳಿ ಮುಖ್ಯರಸ್ತೆಯಿಂದ ಜಾಬೀಕೋಡಿ, ದೊಡ್ಡಕೊಳತ್ತೂರು ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆ ಮಳೆಯಿಂದ ಗುಂಡಿ ಬಿದ್ದು ಹಳ್ಳದಂತೆ ಆಗಿದೆ. ಈ ರಸ್ತೆಯನ್ನು ಡಾಮರೀಕರಣ ಮಾಡಿಸಿಕೊಡುವಂತೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಮಾಜಿ ಅರಣ್ಯ ಸಚಿವ ಬಿ.ಎ. ಜೀವಿಜಯ ಅವರಿಗೆ ದುಂಡಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಡಿ.ಪಿ. ಬೋಜಪ್ಪ ಹಾಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.
ಜಾಬೀಕೋಡಿ ಗ್ರಾಮದಿಂದ ದೊಡ್ಡಕೊಳತ್ತೂರು ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆ ಒಂದೂವರೆ ಕಿಲೋಮೀಟರ್ ದೂರ ಸಾಗುವ ರಸ್ತೆ ಹಾಳಾಗಿದ್ದು, ರಸ್ತೆಗಳಲ್ಲಿ ಗುಂಡಿ ಬಿದ್ದು ಹಳ್ಳದಂತೆ ಆಗಿದೆ. ಗ್ರಾಮಸ್ಥರು ತಿರುಗಾಡಲು, ವಾಹನಗಳು ಓಡಾಡಲು ತೊಂದರೆಯಾಗಿದೆ. ದೊಡ್ಡಕೊಳತ್ತೂರು ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯು ಮುಚ್ಚುವ ಹಂತದಲ್ಲಿದ್ದು, ಶಾಲೆಯ ಉಳಿದ ಮಕ್ಕಳು ಚಿಕ್ಕಕೊಳತ್ತೂರು ಸರಕಾರಿ ಶಾಲೆಗೆ ಬರಲು ರಸ್ತೆಯನ್ನು ಡಾಮರೀಕರಣ ಮಾಡಿಸಿಕೊಡುವಂತೆ ಮನವಿಯಲ್ಲಿ ಕೋರಲಾಗಿದೆ.