ಮಡಿಕೇರಿ, ಸೆ. 7: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಿಗ್ಗಾಲು ಗಿರೀಶ್, ಎನ್.ಎಂ. ಕುಮಾರ ದೇವಕಿ ಪಿ.ಎಂ. ಹಾಗೂ ಜಾನ್ಸಿ ಅವರುಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಸನಗಳನ್ನು ಮತ್ತು ಧ್ಯಾನದ ಮಹತ್ವವನ್ನು ಜಾನ್ಸಿ ತಿಳಿಸಿಕೊಟ್ಟರು. ಸಾಹಿತಿ ಕಿಗ್ಗಾಲು ಗಿರೀಶ್ ಅವರು ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ಬಗ್ಗೆ ತಿಳಿಸಿ, ಪತ್ರಿಕೆಗಳು ಬೆಳೆದು ಬಂದ ಬಗೆ, ಪತ್ರಕರ್ತ ಪಾಲಿಸಬೇಕಾದ ಧರ್ಮಗಳು ಹಾಗೂ ಪತ್ರಿಕೋದ್ಯಮದಲ್ಲಿ ವಿದ್ಯಾರ್ಥಿಗಳಿಗಿರುವ ಅವಕಾಶದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಪತ್ರಿಕೋದ್ಯಮದ ತರಗತಿಗೆ ಆಗಮಿಸಿದ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಎನ್.ಎಂ. ಕುಮಾರ್ ಪತ್ರಿಕೆಗಳಲ್ಲಿ ಛಾಯಾಚಿತ್ರಗಳ ಮಹತ್ವ ಮತ್ತು ಒಂದು ಚಿತ್ರವು ಹಲವಾರು ಸಂಗತಿಗಳನ್ನು ಒಳಗೊಂಡಿರುತ್ತದೆಂದು ತಿಳಿಸಿದರು. ಉತ್ತಮ ಛಾಯಾ ಚಿತ್ರಗಳು, ಛಾಯಾಚಿತ್ರಕಾರನ ಕೌಶಲ್ಯವನ್ನು ತಿಳಿಸುತ್ತದೆ ಎಂದು ನುಡಿದರು.
ಅಂತಿಮ ಬಿ.ಕಾಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ ಅವರು ದಿನನಿತ್ಯದ ಜೀವನದಲ್ಲಿ ಮಾತನಾಡುವಾಗ ಆಂಗ್ಲ ಭಾಷೆಯಲ್ಲಿ ವ್ಯಾಕರಣ ಬಹಳ ಮುಖ್ಯ. ಆಂಗ್ಲ ಭಾಷೆಯನ್ನು ಮಾತನಾಡಲು ಕಲಿಯಬೇಕೆಂದು ಹೇಳಿದರು.
ಇದೇ ಸಂದರ್ಭ ಕಿಗ್ಗಾಲು ಗಿರೀಶ್ ಅವರು ಕೊಳಲು ವಾದನದ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಉಪನ್ಯಾಸಕ ವೃಂದದವರು ಹಾಜರಿದ್ದರು.