ಮಡಿಕೇರಿ, ಸೆ. 7: ಖಾಸಗಿ ಹಳೆಯ ಬಸ್ ನಿಲ್ದಾಣದ ಹೈಮಾಸ್ಕ್ ವಿದ್ಯುತ್ ಕಂಬವನ್ನು ಸ್ಥಳಾಂತರಿಸಿ ಸ್ವಾಡ್ರನ್ ಲೀಡರ್ ಹುತಾತ್ಮ ಅಜ್ಜಮಾಡ ಬಿ. ದೇವಯ್ಯ ಅವರ ಪುತ್ಥಳಿ ನಿರ್ಮಿಸಲಾಗವದು ಎಂದು ನಿರ್ಧಾರ ಕೈಗೊಂಡಿದ್ದು, ಈ ದೀಪ ಕಂಬ ಸ್ಥಳಾಂತರಿಸುವ ಖರ್ಚನ್ನು ಅಜ್ಜಮಡ ಕುಟುಂಬಸ್ಥರು ಭರಿಸಲಿದ್ದಾರೆ ಎಂದು ಫೋರಂ ಕಾರ್ಯಾಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ತಿಳಿಸಿದ್ದಾರೆ. ವೀರ ಯೋಧನಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.
ಕೊಡಗಿನಲ್ಲಿ ಇಬ್ಬರಿಗೆ ಸೇನೆಯ ಅತ್ಯುನ್ನತ ಶೌರ್ಯ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಗಿದೆ. ಒಬ್ಬರು ಕರ್ನಲ್ ಪುಟ್ಟಿಚಂಡ ಗಣಪತಿಯಾದರೆ ಮತ್ತೋರ್ವ ಹುತಾತ್ಮ ಸ್ಕ್ವಾ.ಲೀ. ಅಜ್ಜಮಾಡ ಬಿ. ದೇವಯ್ಯ 1965ರ ಭಾರತ - ಪಾಕಿಸ್ತಾನ ಯುದ್ಧದಲ್ಲಿ ತನ್ನ ಯುದ್ಧ ವಿಮಾನದಲ್ಲಿ ಇಂಧನ ಕಡಿಮೆ ಇದೆ ಎಂದು ತಿಳಿದಿದ್ದರು. ಲೆಕ್ಕಿಸದೇ ಮುನ್ನುಗ್ಗಿ ಪಾಕಿಸ್ತಾನದ ಬಂಕರನ್ನು ನಾಶಗೊಳಿಸಿ ಶತ್ರುಗಳ ಗುಂಡಿಗೆ ಬಲಿಯಾಗಿ ವೀರ ಮರಣವನಪ್ಪಿದ ಸ್ಮರಣ ದಿನವನ್ನು ಆಚರಿಸುವದು ಹೆಮ್ಮೆಯ ವಿಷಯವೆಂದು ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಹೇಳಿದರು. ಮಡಿಕೇರಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ವೃತ್ತದಲ್ಲಿ ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬದ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ಕ್ವಾ.ಲೀ. ಅಜ್ಜಮಾಡ ಬಿ. ದೇವಯ್ಯ ಅವರ ಹುತಾತ್ಮ ದಿನಾಚರಣೆಯಲ್ಲಿ ನುಡಿದರು.
ಸ್ಕ್ವಾ.ಲೀ. ಅಜ್ಜಮಾಡ ಬಿ. ದೇವಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಸಲ್ಲಿಸಿ ಗಣ್ಯರು, ಯೋಧರು, ಸಾರ್ವಜನಿಕರು ಪುಷ್ಪ ಅರ್ಪಿಸಿ ಒಂದು ನಿಮಿಷ ಮೌನಾಚರಿಸಲಾಯಿತು. ಜೊತೆಗೆ ಕೊಡಗಿನ ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಆತ್ಮಕ್ಕೆ ಶಾಂತಿ ಕೋರ ಲಾಯಿತು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಮಾತನಾಡಿ, ದೇವಯ್ಯ ವೀರತ್ವದ ಬಗ್ಗೆ ಕೊಂಡಾಡಿದರು. ದೇಶದ ಅಪ್ರತಿಮ ವೀರರಾಗಿದ್ದು ಯಾವದೇ ಜಾತಿ ಬೇದವಿಲ್ಲದೆ ಹುತಾತ್ಮ ದಿನವನ್ನು
(ಮೊದಲ ಪುಟದಿಂದ) ಆಚರಿಸುವದು ನಮ್ಮೆಲ್ಲರ ಕರ್ತವ್ಯವಾಗ ಬೇಕೆಂದರು. ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ಕೊಡಗು ಚಿಕ್ಕ ಜಿಲ್ಲೆಯಾಗಿದ್ದರೂ ಸೇನಾಪಡೆಗೆ ಲೆಕ್ಕವಿಲ್ಲದಷ್ಟು ಸೇನಾಧಿಕಾರಿಗಳನ್ನು, ಯೋಧರನ್ನು ನೀಡಿದೆ. ಅಜ್ಜಮಾಡ À ಬಿ. ದೇವಯ್ಯರಂತಹ ಅಪ್ರತಿಮ ವೀರ ಸೇನಾನಿಗಳಿಂದ ಯುವ ಪೀಳಿಗೆಗೆ ಸ್ಫೂರ್ತಿ ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗು ಜಿಲ್ಲೆ ಯೋಧರ ಬೀಡಾಗಿದ್ದು ಲೆಕ್ಕವಿಲ್ಲದಷ್ಟು ಯೋಧರು ದೇಶ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಅಜ್ಜಮಾಡ À ಬಿ. ದೇವಯ್ಯನವರ ಸಾಧನೆಯನ್ನು ನೆನಪಿಸಿಕೊಂಡರು. ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ವೀರರ ಸ್ಮರಣೆಯನ್ನು ಆಚರಿಸುತ್ತಿರುವ ಕೊಡವ ಮಕ್ಕಡ ಕೂಟಕ್ಕೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅಜ್ಜಮಾಡ ಕುಟುಂಬದ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ನಿರ್ದೇಶಕ ಚೊಟ್ಟೆಯಂಡ ಕಾರ್ಸನ್ ಸದಸ್ಯರು, ಅಜ್ಜಮಾಡ ಕುಟುಂಬಸ್ಥರು, ನಿವೃತ್ತ ಸೇನಾಧಿಕಾರಿಗಳು, ಯೋಧರು, ಸಾರ್ವಜನಿಕರು ಭಾಗವಹಿಸಿದ್ದರು. ಕೂಟ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಸ್ವಾಗತಿಸಿದರು. ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
-ವರದಿ : ಕರುಣ್ ಕಾಳಯ್ಯ