ಸೋಮವಾರಪೇಟೆ, ಸೆ. 7: ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಹಾ ಮಳೆಯಿಂದ ಹಾನಿ ಗೊಳಗಾದ ಕೃಷಿ ಪ್ರದೇಶಗಳ ಪರಿಶೀಲನಾ ಕಾರ್ಯ ಆರಂಭ ವಾಗಿದ್ದು, ಕಂದಾಯ, ಕೃಷಿ, ಕಾಫಿ ಮಂಡಳಿ, ತೋಟಗಾರಿಕಾ ಇಲಾಖಾಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸುತ್ತಿದ್ದಾರೆ.
ಈ ಭಾಗದಲ್ಲಿ 300 ಇಂಚಿಗೂ ಅಧಿಕ ಮಳೆಯಾಗಿದ್ದು, ನಾಟಿ ಮಾಡಿದ್ದ ಗದ್ದೆ, ಸಸಿಮಡಿ, ಕಾಫಿ, ಕರಿಮೆಣಸು ಸೇರಿದಂತೆ ಇತರ ಕೃಷಿ ಹಾನಿಗೊಳಗಾಗಿದೆ. ಕೃಷಿಕ ವರ್ಗವೇ ಅಧಿಕವಿರುವ ಈ ಭಾಗದಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಈ ಭಾಗದಲ್ಲಿ ಹಾನಿ ಗೀಡಾಗಿರುವ ಭತ್ತ, ಕಾಫಿ, ಕರಿಮೆಣಸಿನ ಪರಿಶೀಲನೆ ನಡೆಸಲಾಗುತ್ತಿದ್ದು, ಸ್ಥಳದಲ್ಲಿಯೇ ಮೊಬೈಲ್ ಆ್ಯಪ್ ಮೂಲಕ ವರದಿ ನೀಡಲಾಗುತ್ತಿದೆ. ಹೋಬಳಿಯ ಕೂತಿ, ಬೆಟ್ಟದಳ್ಳಿ, ಕುಮಾರಳ್ಳಿ, ಶಾಂತಳ್ಳಿ ಭಾಗಕ್ಕೆ ಪ್ರತ್ಯೇಕವಾಗಿ 4 ತಂಡಗಳ ಮೂಲಕ ಸರ್ವೆ ಮಾಡಲಾಗುತ್ತಿದೆ. ಮುಂದಿನ ಒಂದು ವಾರದೊಳಗೆ ಪರಿಶೀಲನಾ ಕಾರ್ಯ ಮುಕ್ತಾಯಗೊಳ್ಳಲಿದೆ ಎಂದು ಶಾಂತಳ್ಳಿ ನಾಡಕಚೇರಿಯ ಕಂದಾಯ ನಿರೀಕ್ಷಕ ನಾಗೇಂದ್ರ ತಿಳಿಸಿದ್ದಾರೆ.