ಮಡಿಕೇರಿ, ಸೆ. 7: 2018ನೇ ಇಸವಿ ಆರಂಭಗೊಂಡು ಸೆಪ್ಟಂಬರ್ 7ಕ್ಕೆ ಬರೋಬ್ಬರಿ 250ನೇ ದಿವಸ. ವರ್ಷದ 365 ದಿವಸಗಳ ಪೈಕಿ ಇಷ್ಟು ದಿನಗಳು ಪೂರ್ಣಗೊಳ್ಳುತ್ತಿದ್ದು, ಇನ್ನು ಉಳಿದಿರುವದು 2018ರ ಮುಕ್ತಾಯಕ್ಕೆ ಕೇವಲ 115 ದಿವಸಗಳು ಮಾತ್ರ. ಈ ಅವಧಿಯಲ್ಲಿ ಜಿಲ್ಲೆ ಬಹುತೇಕ ಸಂಕಷ್ಟದ ದಿನಗಳನ್ನೇ ಕಂಡಿರುವದು ಜನತೆ ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುವಂತಾಗಿರುವದು ಜನಮಾನಸದಿಂದ ಬೇಗನೆ ಮರೆಯಲಾಗದ್ದು. ಬಹುಶಃ ಈ 250 ದಿನಗಳಲ್ಲಿ ಜನರು ಮಳೆಯ ನಡುವೆಯೇ ಶತದಿನೋತ್ಸವವನ್ನು ಕಳೆದಿದ್ದಾರೆ. ಆರ್ಥಿಕ ವರ್ಷ ಏಪ್ರಿಲ್ನಿಂದ ಮಾರ್ಚ್ ಅಂತ್ಯದ ತನಕವಾದರೂ ಕೃಷಿ ಪ್ರಧಾನವಾದ, ಭೌಗೋಳಿಕವಾಗಿ ವಿಭಿನ್ನವಾಗಿರುವ ಗುಡ್ಡಗಾಡು ಪ್ರದೇಶಗಳಿಂದ ಆವೃತವಾದ ಈ ಜಿಲ್ಲೆ ಆಂಗ್ಲ ಕ್ಯಾಲೆಂಡರ್ನಂತೆ ಕಳೆದು ಹೋಗಿರುವ ಈ ಅವಧಿಯಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ಕಾಣುವಂತಾಗಿತ್ತು.
ಆರಂಭದ ಒಂದೆರಡು ತಿಂಗಳು ಸಭೆ - ಸಮಾರಂಭಗಳು, ಈ ನಡುವೆ ವಿದ್ಯಾರ್ಥಿಗಳ ಪರೀಕ್ಷಾ ಸಮಯ. ನಂತರ ಆರಂಭಗೊಂಡಿದ್ದು, ವಿವಿಧ ಕ್ರೀಡಾ ಹಬ್ಬಗಳ ಸಂಭ್ರಮ. ಆದರೆ ಈ ಬಾರಿ ಕ್ರೀಡಾಹಬ್ಬದ ಸಂಭ್ರಮಗಳಿಗೂ ಕಾಫಿ, ಕರಿಮೆಣಸು ಮತ್ತಿತರ ಕೃಷಿ ಫಸಲುಗಳ ಬೆಲೆಯಲ್ಲಿನ ಇಳಿತ ತೊಡಕಾಗಿತ್ತು. ಇದರೊಂದಿಗೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಾಡಾನೆ, ಹುಲಿ ಸೇರಿದಂತೆ ವನ್ಯ ಪ್ರಾಣಿಗಳ ಉಪಟಳ ಇದು ಒಂದೆಡೆಯಾದರೆ, ಮತ್ತೊಂದೆಡೆ ಎದುರಾಗಿದ್ದು, ವಿಧಾನಸಭಾ ಚುನಾವಣೆಯ ಭರಾಟೆ. ಈ ವಿಚಾರಗಳೂ ಕ್ರೀಡಾ ಸಂಭ್ರಮಗಳಾಗಲಿ, ಮದುವೆ, ಮತ್ತಿತರ ಶುಭ ಕಾರ್ಯಗಳಿಗಾಗಲಿ ಹಲವು ನೀತಿ - ನಿಬಂಧನೆಗಳಿಂದಾಗಿ ಪೆಟ್ಟು ನೀಡಿತ್ತು. ಇದರ ನಡುವೆ ಈ ಬಾರಿ ದ್ವಿತೀಯ ಪಿಯುಸಿ ತರಗತಿಗಳೂ ಬೇಗನೆ ಆರಂಭಗೊಂಡಿದ್ದು, ರಜೆಯ ಮಜೆಗೂ ಅಡ್ಡಿಯಾಗಿತ್ತು.
ಅಂತೂ ಮೇ 12ಕ್ಕೆ ವಿಧಾನಸಭಾ ಚುನಾವಣೆ ಎದುರುಗೊಂಡಾಗ ಜಿಲ್ಲೆಯಾದ್ಯಂತ ಭಾರೀ ಮಳೆ. ಅಂತೂ - ಇಂತೂ ಚುನಾವಣೆ, ಮತ ಎಣಿಕೆ ಮುಗಿದೊಡನೆ ದಿಢೀರನೆ ಮತ್ತೊಂದು ಚುನಾವಣೆ (ನೈಋತ್ಯ ಶಿಕ್ಷಕ - ಪದವೀಧರ ಕ್ಷೇತ್ರ) ಎದುರಾಗಿತ್ತು. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿನ ಪ್ರಮುಖ ಕ್ರೀಡಾಹಬ್ಬಗಳಾದ ಕೌಟುಂಬಿಕ ಹಾಕಿ ಉತ್ಸವ, ಕ್ರಿಕೆಟ್ ಉತ್ಸವ ಸೇರಿದಂತೆ ಇನ್ನಿತರ ಜನಾಂಗೀಯ ಕ್ರೀಡಾಕೂಟಗಳು ಹೆಚ್ಚಿನ ಸಂಭ್ರಮ ಸಡಗರವಿಲ್ಲದೆ ಮುಕ್ತಾಯಗೊಂಡಾಗ ಐದು ತಿಂಗಳು ಕೊನೆಗೊಂಡಿತ್ತು.
ನಂತರ ಕೃಷಿ ಚಟುವಟಿಕೆಗಳ ಸಿದ್ಧತೆ ತೋಟ ಕೆಲಸಗಳ ನಿರ್ವಹಣೆಯ ಕೆಲಸ ನಡೆಯುತ್ತಿದ್ದಾಗ ಜೂನ್ ಎರಡನೇ ವಾರದಿಂದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮುಂಗಾರು ಮಳೆ ಆರ್ಭಟಿಸತೊಡಗಿತು. ಆರಂಭದ ದಿನಗಳಲ್ಲೇ ಶಾಲಾ - ಕಾಲೇಜುಗಳಿಗೆ ರಜೆ ನೀಡಬೇಕಾದ ಅನಿವಾರ್ಯತೆ, ಸಾವು - ನೋವುಗಳೂ, ಸಾರ್ವಜನಿಕ ಆಸ್ತಿ - ಪಾಸ್ತಿ ನಷ್ಟದಂತಹ ಪ್ರಕರಣಗಳೊಂದಿಗೆ ಶುರುವಿಟ್ಟುಕೊಂಡ 2018ರ ಮಳೆಗಾಲ ಜೂನ್ನಿಂದ ಆಗಸ್ಟ್ ಅಂತ್ಯದವರೆಗೆ ಕೊಡಗಿನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಮಾಡಿಬಿಟ್ಟಿರುವದು ದುರಂತಮಯವಾಗಿದೆ.
ಕೃಷಿ ಫಸಲುಗಳ ಮೇಲೆ ವ್ಯತಿರಿಕ್ತ ಪರಿಣಾಮ, ಜಿಲ್ಲಾ ರಸ್ತೆ, ರಾಜ್ಯ ಹೆದ್ದಾರಿ, ಅಂತರರಾಜ್ಯ ರಸ್ತೆ ಸಂಪರ್ಕಗಳು ಕಡಿತ, ಸೇತುವೆ ಕುಸಿತದಂತಹ ದುರಂತಗಳೊಂದಿಗೆ ಶುರುವಿಟ್ಟುಕೊಂಡ ವಾಯು - ವರುಣನ ಅಬ್ಬರ ಆತಂಕ ತಂದಿತು. ಕೆಲವು ದಿನಗಳ ವಿರಾಮ ಆಗಾಗ್ಗೆ ದೊರೆತರೂ ಆಗಸ್ಟ್ ತಿಂಗಳಲ್ಲಿ ಉಂಟಾದ ಭಯಾನಕ ಚಿತ್ರಣಗಳು ಇಡೀ ಜಿಲ್ಲೆಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಅದೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದು, ಬೆಟ್ಟಗಳೇ ಧರೆಗುರುಳಿದ್ದರಿಂದ ತೋಟ, ಮನೆಗಳು ಮಣ್ಣಿನಡಿ ಅವಶೇಷಗಳಾಗಿ ಹೋಗಿವೆ. ಹಲವಷ್ಟು ಜಾನುವಾರುಗಳೂ ಗತಪ್ರಾಣವಾಗಿವೆ.
ಜಿಲ್ಲೆಯಿಂದ ಹೊರ ತೆರಳಲು ಸಾಧ್ಯವಿಲ್ಲದಂತ ಪರಿಸ್ಥಿತಿ ಉಂಟಾಗಿದ್ದು, ಕೊಡಗು ಅಕ್ಷರಶಃ ದ್ವೀಪದಂತಾಗಿತ್ತು. ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಕೂಡ ಸರಿಯಾಗಿ ಆಚರಿಸಲಾಗಲಿಲ್ಲ. ರಾಜ್ಯ ಸರಕಾರದ ಪ್ರಮುಖರಾದಿಯಾಗಿ ಕೇಂದ್ರದ ಪ್ರಮುಖರು, ಸೇನಾ ಕಾರ್ಯಾಚರಣೆಯಂತಹ ಘಟನಾವಳಿಗಳು ಮರೆಯಲಾಗದ್ದು. ಕೊಡಗಿಗೆ ಇಡೀ ರಾಜ್ಯವೇ ಮಿಡಿದಿದೆ. ಆದರೂ ಕೊಡಗು ಜರ್ಜರಿತವಾಗಿದ್ದು, ಎಲ್ಲಾ ಉದ್ದಿಮೆಗಳು, ವಹಿವಾಟುಗಳು ಇಲ್ಲದಂತಾಗಿವೆ. ಈ ರೀತಿಯಾಗಿ ಈ ತನಕವೂ ಕೊಡಗು ಸಂಕಷ್ಟವನ್ನೇ ಕಂಡಿದೆ. ಇನ್ನು ಮತ್ತೊಂದು ಮಳೆಗಾಲ ಆರಂಭಗೊಳ್ಳುವ ಮುನ್ನ ಕೊಡಗು ಪುನರ್ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಯೋಜನಾಬದ್ಧವಾದ ಕೆಲಸ ಕಾರ್ಯಗಳು, ಮುಂದಾಲೋಚನೆಯ ಯೋಜನೆಗಳು ರೂಪಿತವಾಗಬೇಕಿವೆ. ಇದೀಗ ದೊರೆತಿರುವ ಪರಿಹಾರಗಳು, ಸಾಂತ್ವನಗಳು ಸದ್ಯದ ಮಟ್ಟಿಗೆ ಮಾತ್ರ ಜನತೆಗೆ ನೆರವಾಗಲಿದ್ದು, ಭವಿಷ್ಯದ ಚಿಂತನೆಯೊಂದಿಗೆ ಕೊಡಗನ್ನು ಕಟ್ಟಬೇಕಾಗಿದೆ. ಜಿಲ್ಲೆಯಲ್ಲಿ ನೊಂದ ಜನರಿಗಾಗಿ ಇತರರೂ ತಮ್ಮ ಕಷ್ಟವನ್ನು ಬದಿಗೊತ್ತಿ ಸ್ಪಂದಿಸಿದ್ದು, ಹಬ್ಬಾಚರಣೆಗಳು ಸರಳವಾಗಿವೆ. ಕೆಲವಾರು ಕಡೆ ಆಚರಿಸ್ಪಟ್ಟಿಲ್ಲ. ಮುಂದಿನ ವರ್ಷದ ಕ್ರೀಡಾಹಬ್ಬಗಳನ್ನೂ ಮುಂದೂಡಿ ಮಾನವೀಯತೆ ತೋರಿದ್ದಾರೆ. ಇವೆಲ್ಲವೂ ಜರ್ಜರಿತವಾದವರಿಗೆ ಸ್ಥೈರ್ಯ ತುಂಬುವಂತಹ ಕೊಡಗಿನವರ ದಿಟ್ಟ ನಿಲುವಾಗಿದ್ದು, ಈ ತನಕ ಸಂಕಷ್ಟವನ್ನೇ ಕಂಡ ಜನರು, ಆದಷ್ಟು ಶೀಘ್ರವಾಗಿ ಸಂತುಷ್ಟರಾಗಲು ಸರಕಾರಗಳು ಸಮರೋಪಾದಿಯಲ್ಲಿ ಸ್ಪಂದಿಸಲೇಬೇಕಾಗಿದೆ. - ಶಶಿ ಸೋಮಯ್ಯ