ಮಡಿಕೇರಿ, ಸೆ. 7: ಪ್ರಾಕೃತಿಕ ವಿಕೋಪದಿಂದ ಕಾಫಿ ತೋಟ, ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ಗ್ರಾಮೀಣ ಜನರಿಗೆ ಅವರಿದ್ದ ಗ್ರಾಮದಲ್ಲೆ ಲಭ್ಯವಿರುವ ‘ಸಿ ಮತ್ತು ಡಿ ದರ್ಜೆಯ ಭೂಮಿ’ಯನ್ನು ಹಂಚಿಕೆ ಮಾಡಬೇಕೆಂದು ಜಿ.ಪಂ. ಮಾಜಿ ಅಧ್ಯಕ್ಷರು ಹಾಗೂ ಮುಕ್ಕೋಡ್ಲು ನಿವಾಸಿ ಶಾಂತೆಯಂಡ ರವಿ ಕುಶಾಲಪ್ಪ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಭೀರ ಸ್ವರೂಪದ ಗುಡ್ಡ ಕುಸಿತದಿಂದ ತೀವ್ರ ಸ್ವರೂಪದ ಹಾನಿ ನಡೆದಿರುವ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಈ ಹಿಂದೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವ ಸಿ ಮತ್ತು ಡಿ ದರ್ಜೆಯ ಜಮೀನು ಇದೆ. ಇದನ್ನು ಮರಳಿ ಕಂದಾಯ ಇಲಾಖೆಗೆ ಪಡೆದುಕೊಂಡು ತೋಟಗಳನ್ನು ಕಳೆದುಕೊಂಡವರಿಗೆ ನೀಡುವ ಮೂಲಕ, ಮತ್ತೆ ಬದುಕು ಕಟ್ಟಿಕೊಳ್ಳಲು ಸಂತ್ರಸ್ತರಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಪ್ರಾಕೃತಿಕ ವಿಕೋಪ ಸಂಭವಿಸಿದ ಗ್ರಾಮೀಣ ಭಾಗಗಳಲ್ಲಿ ಅರ್ಧ ಏಕರೆಯಂತೆ ಸಣ್ಣ ಪುಟ್ಟ ಹಿಡುವಳಿಗಳನ್ನು ಮಾಡಿಕೊಂಡು, ಕೂಲಿ ಕೆಲಸವನ್ನು ಅವಲಂಭಿಸಿ ಬದುಕುತ್ತಿರುವ ಸಾಕಷ್ಟು ಮಂದಿ ಇದ್ದಾರೆ. ಇಂತಹವರಿಗೆ ಕೇವಲ ಒಂದು ಮನೆ ನಿರ್ಮಿಸಿಕೊಟ್ಟರೆ ಅವರ ಬದುಕು ಹಸನಾಗುವದಿಲ್ಲ. ಈ ಹಿನ್ನೆಲೆಯಲ್ಲಿ 40 ರಿಂದ 50 ಏಕರೆ ಜಾಗವನ್ನು ಇವರಿಗಾಗಿ ಗುರುತಿಸಿ ತಲಾ ಅರ್ಧ ಎಕರೆ ಜಾಗವನ್ನು ಅಂತಹವರಿಗೆ ಒದಗಿಸುವ ಮೂಲಕ ಉತ್ತಮ ಬದುಕು ನಡೆಸಲು ಅವರಿಗೆ ನೆರವಾಗಬೇಕೆಂದರು.

ಕೇಂದ್ರಕ್ಕೆ ನಿಯೋಗ: ಪ್ರಾಕೃತಿಕ ವಿಕೋಪದಿಂದ ತೋಟ, ಗದ್ದೆ, ಮನೆಗಳನ್ನು ಕಳೆÉದುಕೊಂಡು ನಿರ್ಗತಿಕರಾಗಿರುವ ಮಂದಿಗೆ ಹೆಚ್ಚಿನ ಪರಿಹಾರ ಧನವನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಕೇವಲ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಪರಿಹಾರದ ನಿಯಮಗಳಿಗೆ ಸೀಮಿತವಾಗಿ ಪರಿಹಾರ ಒದಗಿಸಿದಲ್ಲಿ ಸಂತ್ರಸ್ತರಿಗೆ ಯಾವದೇ ಪ್ರಯೋಜನವಿಲ್ಲ. ಹೆಚ್ಚಿನ ಪರಿಹಾರ ಒದಗಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆ ಕ್ಷೇತ್ರದ ಸಂಸದರು, ಶಾಸಕರು, ಪಕ್ಷದ ರಾಜ್ಯ ಪ್ರಮುಖರನ್ನು ಒಳಗೊಂಡಂತೆ ಕೇಂದ್ರಕ್ಕೆ ನಿಯೋಗ ತೆರಳುವ ಬಗ್ಗೆ ಚಿಂತಿಸಲಾಗುತ್ತಿದೆ ಯೆಂದು ರವಿ ಕುಶಾಲಪ್ಪ ತಿಳಿಸಿದರು.

ಅತಿವೃಷ್ಟಿ ಮತ್ತು ಗುಡ್ಡ ಕುಸಿತದ ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಮುಕ್ಕೋಡ್ಲು, ಹಮ್ಮಿಯಾಲ, ಕಾಲೂರು ಸೇರಿದಂತೆ ವಿವಿಧೆಡೆಗಳಿಗೆ ಕಾಫಿ ಮಂಡಳಿ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಿ ಶೇ. 80 ರಷ್ಟು ಫಸಲು ಹಾನಿಯಾಗಿದೆಯೆಂದು ವರದಿ ಮಾಡಿದ್ದಾರೆ. ಆದರೆ, ಇನ್ನೂ ಜಿಲ್ಲೆಯಲ್ಲಿ ಮುಂಗಾರಿನ ಅವಧಿ ಪೂರ್ಣಗೊಳ್ಳÀದಿರುವದರಿಂದ, ಒಂದಷ್ಟು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಈಗ ಇರುವ ಫಸಲು ಸಂಪೂರ್ಣ ಹಾನಿಗೊಳ ಗಾಗುತ್ತದಾದ್ದರಿಂದ ಶೇ. 100 ರಷ್ಟು ಬೆಳೆ ಹಾನಿಯಾಗಿದ್ದು, ಪರಿಹಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.

ಪ್ರಸಕ್ತ ಸಾಲಿನಲ್ಲಿ ಕೇವಲ ಗುಡ್ಡ ಕುಸಿತದ ಪ್ರಾಕೃತಿಕ ವಿಕೋಪ ಸಂಭವಿಸಿದ ಪ್ರದೇಶ ಸೇರಿದಂತೆ ದಕ್ಷಿಣ ಕೊಡಗಿನ ಹಲವು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆÉಯಾಗಿ ಕಾಫಿ ಫಸಲು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಸಂಭವಿಸಿದೆ. ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವದರೊಂದಿಗೆ, ಅಗತ್ಯ ಪರಿಹಾರ ನೀಡಬೇಕು ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಹೊರ ಬರುವ ಸಲುವಾಗಿ ಮುಂದಿನ ಐದು ವರ್ಷಗಳವರೆಗೆ ಅಗತ್ಯ ನೆರವನ್ನು ಒದಗಿಸಬೇಕೆಂದರು.

ಮಳೆಯ ಪ್ರಮಾಣ ಈಗಾಗಲೇ ಕಡಿಮೆಯಾಗಿದ್ದು, ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಗ್ರಾಮಗಳಲ್ಲಿ ತಾತ್ಕಾಲಿಕವಾದ ಹಾದಿಯನ್ನು ಶೇ. 40 ರಷ್ಟು ನಿರ್ಮಿಸಲಾಗಿದೆ. ಈ ಹಿನ್ನೆಲೆ ಒಂದಷ್ಟು ತೋಟ, ಮನೆಯನ್ನು ಉಳಿಸಿಕೊಂಡಿರುವ ಕುಟುಂಬಗಳು ಗ್ರಾಮಕ್ಕೆ ಮರಳುವಂತೆ ಶಾಂತೆಯಂಡ ರವಿ ಕುಶಾಲಪ್ಪ ಮನವಿ ಮಾಡಿದರು. ಈಗಾಗಲೇ ವಿದ್ಯುತ್ ಸಂಪರ್ಕವನ್ನು ಮರಳಿ ಸ್ಥಾಪಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಕೆಲವು ದಿನಗಳಲ್ಲಿ ವಿದ್ಯುಚ್ಛಕ್ತಿ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ಕಳೆದುಕೊಂಡ ಜಾಗದ ನಾಲ್ಕು ಪಟ್ಟು ಹಣ ನೀಡುವ ಆಮಿಷವೊಡ್ಡುತ್ತಿರುವ ಪರಿಸರವಾದಿಗಳೆನಿಸಿಕೊಂಡ ಮಂದಿ ಗ್ರಾಮೀಣರನ್ನು ಶಾಶ್ವತವಾಗಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಪರಿಸರವಾದಿಗಳು ತಮ್ಮ ಬಳಿ ಇರುವ ಜಾಗವನ್ನು ಸಂತ್ರಸ್ತರಿಗೆ ನೀಡಲಿ ಎಂದು ಆಗ್ರಹಿಸಿದ ರವಿ ಕುಶಾಲಪ್ಪ, ಒಕ್ಕಲೆಬ್ಬಿಸುವ ಪ್ರಯತ್ನಗಳನ್ನು ಕೈಬಿಡದಿದ್ದಲ್ಲಿ ಗ್ರಾಮಸ್ಥರೆ ಒಗ್ಗೂಡಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸುಳ್ಳು ಮಾಹಿತಿ

ಕೊಡಗು ಜಿಲ್ಲೆಯ ಮಡಿಕೆÉೀರಿ ತಾಲೂಕಿನ ಮಕ್ಕಂದೂರು, ಗಾಳಿಬೀಡು, ಕೆ. ನಿಡುಗಣೆ, ಜೋಡುಪಾಲ, ಸಂಪಾಜೆ, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಗರ್ವಾಲೆ, ಸೂರ್ಲಬ್ಬಿ ಹೀಗೆ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಷ್ಟೆ ತೀವ್ರ ಸ್ವರೂಪದ ಪ್ರಾಕೃತಿಕ ವಿಕೋಪ ನಡೆದಿದೆ. ಆದರೆ, ಇದನ್ನೇ ಬಳಸಿಕೊಂಡು ಇಡೀ ಜಿಲ್ಲೆಯೇ ಸರ್ವನಾಶವಾಗಿದೆ ಎನ್ನುವ ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗಿದೆ ಎಂದು ರವಿ ಕುಶಾಲಪ್ಪ ಬೆÉೀಸರ ವ್ಯಕ್ತಪಡಿಸಿದರು.

ನಿಜಕ್ಕೂ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನೊಂದವರಿಗೂ ಮಿಗಿಲಾಗಿ, ಯಾವದೇ ಪ್ರಾಕೃತಿಕ ವಿಕೋಪ ಘಟಿಸದ ಪ್ರದೇಶಗಳ ಮಂದಿ ಸಂತ್ರಸ್ತರಿಗೆಂದು ಇರುವ 3800 ರೂ. ಪರಿಹಾರದ ಹಣ ಸೇರಿದಂತೆ ಸಾಮಗ್ರಿಗಳನ್ನು ಪಡೆದಿದ್ದು, ಇದು ಅನ್ಯಾಯ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಸುಭಾಷ್ ಸೋಮಯ್ಯ, ಕೆ. ನಿಡುಗಣೆ ಗ್ರಾ.ಪಂ. ಸದಸ್ಯ ಡೀನ್ ಬೋಪಣ್ಣ ಹಾಗೂ 2ನೇ ಮೊಣ್ಣಂಗೇರಿಯ ಧನಂಜಯ್ ಉಪಸ್ಥಿತರಿದ್ದರು.