ಗೋಣಿಕೊಪ್ಪಲು, ಸೆ. 7: ವಿವಿಧ ಇಲಾಖಾ ಅಧಿಕಾರಿಗಳ ಗೈರಿನಿಂದಾಗಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಗ್ರಾಮಸಭೆ ಹಾಗೂ ಜಮಾಬಂದಿ ಕಾರ್ಯಕ್ರಮವನ್ನು ಮುಂದೂಡಲಾಯಿತು. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್ ಅಧ್ಯಕ್ಷತೆಯಲ್ಲಿ 2018-19ನೇ ಸಾಲಿನ ಮೊದಲ ಗ್ರಾಮಸಭೆ ಹಾಗೂ ಜಮಾಬಂದಿ ನಿಗದಿತ ಸಮಯಕ್ಕೆ ಆರಂಭವಾಯಿತು. ಕಾರ್ಯ ಸೂಚಿಯಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಸ್ವಾಗತಿಸಿದರು. ನಂತರ ಸಭೆಗೆ ಆಗಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಭೆಗೆ ಪರಿಚಯಿಸುವಂತೆ ಗ್ರಾಮಸ್ಥ ಪುಚ್ಚಿಮಾಡ ಹರೀಶ್ ಮನವಿ ಮಾಡಿದರು.

ಈ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳ ಗೈರು ಎದ್ದು ಕಂಡಿತು. ಮಧ್ಯೆ ಪ್ರವೇಶಿಸಿದ ಗ್ರಾಮಸ್ಥರಾದ ಅಡ್ಡಂಡ ಕಾರ್ಯಪ್ಪ, ಕೋಳೇರ ದಯಾ ಚಂಗಪ್ಪ, ಪ್ರಮುಖವಾಗಿ ಕಂದಾಯ ಇಲಾಖೆ, ಕ್ರೀಡಾ ಇಲಾಖೆ, ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಲಭ್ಯವಿಲ್ಲ. ಇದರಿಂದ ಸಭೆ ನಡೆಸಿ ಪ್ರಯೋಜನವಿಲ್ಲ. ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ. ಸಭೆ ರದ್ದುಪಡಿಸಿ ಮುಂದೆ ಎಲ್ಲಾ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಆಯೋಜಿಸುವಂತೆ ಸೂಚಿಸಿದರು. ಗ್ರಾಮಸ್ಥರಾದ ಶಾಜಿ ಅಚ್ಚುತ್ತನ್, ಬಿಲ್ಲರಿಕುಟ್ಟಂಡ ಪ್ರಭು, ಗಣೇಶ್ ಮುಂತಾದವರು ಧ್ವನಿ ಗೂಡಿಸಿದರು.

ಈ ಸಂದರ್ಭ ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ.ಕೆ. ಮಹಾದೇವ್ ಅವರು ವಿವಿಧ ಇಲಾಖಾ ಅಧಿಕಾರಿಗಳು ನೆರೆ ಹಾವಳಿ ಸಂತ್ರಸ್ತರ ವಿಷಯದಲ್ಲಿ ವಿವಿಧ ಭಾಗಕ್ಕೆ ತೆರಳಿದ್ದಾರೆ. ಇಲಾಖಾಧಿಕಾರಿಗಳು ಲಭ್ಯವಿಲ್ಲ ಎಂದು ಸಮಾಜಾಯಿಸಿಕೆ ನೀಡಿದರು. ನೋಡಲ್ ಅಧಿಕಾರಿಗಳ ಉತ್ತರಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಲಿಲ್ಲ. ಈ ಭಾಗದ ಕೆಲವು ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆಯೇ ಚರ್ಚಿಸಬೇಕಾಗಿದೆ. ಸಭೆ ಮುಂದೂಡುವದು ಉತ್ತಮ ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮಸ್ಥರ ಮಾತಿನಂತೆ ಅಧ್ಯಕ್ಷೆ ಮೂಕಳೇರ ಸುಮಿತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ, ನೋಡಲ್ ಅಧಿಕಾರಿಗಳ ಸಲಹೆ ಪಡೆದು ಗ್ರಾಮ ಸಭೆಯನ್ನು ಮುಂದೂಡಿದರು. ಜಿ.ಪಂ. ಸದಸ್ಯ ಶ್ರೀಜಾ ಸಾಜಿ ಅಚ್ಚುತ್ತನ್, ತಾ.ಪಂ.ಸದಸ್ಯೆ ಮೂಕಳೇರ ಆಶಾ, ಪಂಚಾಯಿತಿ ಸದಸ್ಯರಾದ ಅಮ್ಮತ್ತೀರ ಸುರೇಶ್, ಮೂಕಳೇರ ಲಕ್ಷ್ಮಣ, ಬೊಟ್ಟಂಗಡ ದಶಮಿ, ರಶೀದ್, ಮೂಕಳೇರ ಕಾವ್ಯ ಸೇರಿದಂತೆ ಇನ್ನಿತರ ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.