ಕೂಡಿಗೆ, ಸೆ. 7: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿಯ ಹಾರಂಗಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಕುಟುಂಬದವರಿಗೆ ಮತ್ತು ಆ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಸ್ಥರಿಗೆ ಗ್ರಾಮ ಪಂಚಾಯತಿ ಆಹಾರ ಕಿಟ್ ವಿತರಣೆ ಮಾಡುತ್ತಿದೆ. ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತ್ತೂರು ಗ್ರಾಮಸ್ಥರಿಗೂ ಸಹ ಆಹಾರ ಕಿಟ್ ವಿತರಣೆ ಮಾಡುತ್ತಿಲ್ಲವಾದ್ದರಿಂದ ಜಿಲ್ಲಾಧಿಕಾರಿಯವರು ಈ ಬಗ್ಗೆ ಮಾಹಿತಿ ಪಡೆದು ನಂತರ ಆಹಾರ ಕಿಟ್ ಅನ್ನು ವಿತರಿಸಲು ಸಹಕರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಬಸವನತ್ತೂರು ಗ್ರಾಮವು ಕಾವೇರಿ ನದಿಗೆ ಹತ್ತಿರದಲ್ಲಿದೆ. ಇತ್ತಿಚೆಗೆ ಸುರಿದ ಭಾರೀ ಮಳೆಯ ಕಾರಣದಿಂದ ಕಾವೇರಿ ನದಿ ಉಕ್ಕಿ ನೀರು ಹೆಚ್ಚಾಗಿ ಮನೆಗಳಿಗೆ ನುಗ್ಗಿ ಬಾರಿ ನಷ್ಟ, ಹಾಗೂ ಕೆಲವು ಮನೆಗಳು ಕುಸಿತಗೊಂಡಿವೆ.

ಅದೆ ಪರಿಸ್ಥಿತಿಗೆ ಒಳಗಾಗಿರುವ ಬಸವನತ್ತೂರು ಗ್ರಾಮದಲ್ಲಿನ ಗ್ರಾಮಸ್ಥರಿಗೂ ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಕಿಟ್ ಅನ್ನು ವಿತರಿಸಬೇಕು ಎಂದು ಈ ವ್ಯಾಪ್ತಿಯ ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್‍ಕಾಳಪ್ಪ, ಸಾವಿತ್ರಿರಾಜು ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.