ವೀರಾಜಪೇಟೆ, ಸೆ. 7: ಕಳೆದ 25 ದಿನಗಳ ಹಿಂದೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಮನೆ ಮಠಗಳನ್ನು ಕಳೆದುಕೊಂಡಿದ್ದ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 81 ಮಂದಿಗೆ ಮೂರು ಕಡೆಗಳಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿತ್ತು.
ಛತ್ರಕೆರೆಯ ಮಾದರಿ ಪ್ರಾಥಮಿಕ ಶಾಲೆ, ಸುಂಕದಕಟ್ಟೆಯ ಸಮುದಾಯ ಭವನ ಹಾಗೂ ಸಿದ್ದಾಪುರ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಪರಿಹಾರ ಕೇಂದ್ರ ತೆರೆದು ಸಂತ್ರಸ್ತರಿಗೆ ಆಶ್ರಯ ನೀಡಲಾಗಿತ್ತು. ಈಗ ಐದು ದಿನಗಳಿಂದ ಮಳೆ ಕಡಿಮೆಯಾದುದರಿಂದ ಸಂತ್ರಸ್ತರಿಗೆ ತಮ್ಮ ಮನೆ, ಸಂಬಂಧಿಕರ ಮನೆಗಳಿಗೆ ತೆರಳಲು ಅನುವು ಮಾಡಿಕೊಡಲಾಯಿತು.
ಸಂತ್ರಸ್ತರು ಮನೆಗಳಿಗೆ ಹಿಂತಿರುಗುವ ಸಂದರ್ಭ ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಅಪರ ಮತ್ತು ಎರಡನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಿ.ರಮಾ, ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್ ಹಾಗೂ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ಸರಕಾರದಿಂದ ಬಂದ ತುರ್ತು ಪರಿಹಾರ ತಲಾ ಒಬ್ಬರಿಗೆ ರೂ. 3800ರಂತೆ ಒಟ್ಟು 81 ಮಂದಿಗೆ ಚೆಕ್ ವಿತರಿಸಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎನ್.ಪಿ.ಹೇಮ್ಕುಮಾರ್, ಸಿಬ್ಬಂದಿ ಮೂರು ಪರಿಹಾರ ಕೇಂದ್ರಗಳ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದರು.
ವೀರಾಜಪೇಟೆಯ ನೆಹರೂನಗರ, ಅರಸು ನಗರ, ಮಲೆತಿರಿಕೆಬೆಟ್ಟ, ಹಾಗೂ ಕೆ.ಬೋಯಿಕೇರಿಯ ಸಂತ್ರಸ್ತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.