ಸುಂಟಿಕೊಪ್ಪ, ಸೆ. 7: ಅತಿವೃಷ್ಠಿಯಿಂದ ಮನೆ ಆಸ್ತಿ ಕಳಕೊಂಡ ನಿರಾಶ್ರಿತರಿಗೆ ವಿತರಿಸ ಬೇಕಾದ ಅಕ್ಕಿ ಇತರೆ ಸಾಮಗ್ರಿಗಳನ್ನು ಹರದೂರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬಂಧುಗಳ ಮನೆಯಲ್ಲಿ ಶೇಖರಿಸಿಟ್ಟಿದನ್ನು ಸೋಮವಾರಪೇಟೆ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ಕುಶಾಲನಗರ ಆರ್‍ಎಂಸಿ ಗೋದಾಮಿಗೆ ಸಾಗಿಸಿದ್ದಾರೆ. ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ ಅವರು ತಮ್ಮ ಅತ್ತೆ ಕುಂಞ ಎಂಬವರ ಮನೆಯಲ್ಲಿ ಅಕ್ರಮವಾಗಿ ನಿರಾಶ್ರಿತರಿಗೆ ನೀಡಬೇಕಾದ ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ, ಸೋಪು, ರಾಗಿ ಪುಡಿ, ಎಣ್ಣೆ ಇತರ ವಸ್ತುಗಳು ತುಂಬಿದ ಸುಮಾರು 60 ಚೀಲಗಳನ್ನು ದಾಸ್ತಾನಿರಿಸಿದನ್ನು ಕುಶಾಲನಗರ ಆರ್‍ಎಂಸಿ ಗೋದಾಮಿಗೆ ಸಾಗಿಸ ಲಾಗಿದ್ದು, ಅದನ್ನು ಜಲಪ್ರಳಯದಿಂದ ಎಲ್ಲವನ್ನು ಕಳೆದುಕೊಂಡ ನಿರಾಶ್ರಿತರಿಗೆ ಹಂಚಲಾಗುವದೆಂದು ತಹಶೀಲ್ದಾರ್ ಮಹೇಶ್ ಹಾಗೂ ಕಂದಾಯ ಪರಿವೀಕ್ಷಕ ಶಿವಪ್ಪ ತಿಳಿಸಿದರು. ಇದೇ ಸಂದರ್ಭ ಕಾಂಡನಕೊಲ್ಲಿ ಗ್ರಾಮದ ನಿವಾಸಿ ರವಿ ಮಾತನಾಡಿ, ಮೊಗೇರ ಸಮಾಜದ ನಿರಾಶ್ರಿತರಿಗೆ ಸಕಲೇಶ ಪುರದಿಂದ ಮೊಗೇರ ಸಮಾಜದವರು ಸಂಗ್ರಹಿಸಿ ಇಲ್ಲಿಗೆ ಕಳುಹಿಸಿ ಕೊಡಲಾಗಿದೆ. ರಸ್ತೆ ಸರಿ ಇಲ್ಲದ ಕಾರಣ ಇದನ್ನು ಹಂಚಲು ಸಾದ್ಯವಾಗಲಿಲ್ಲ ಎಂದು ತಿಳಿಸಿದರು. ಹರದೂರಿನ ವಾಹನ ಚಾಲಕ ಸುರೇಶ ಮಾತನಾಡಿ, ನಿರಾಶ್ರಿತರಿಗೆ ಸೇರಬೇಕಾದ ಅಕ್ಕಿಯನ್ನು ಅಕ್ರಮವಾಗಿ ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ ಜನಪ್ರತಿನಿಧಿಯಾಗಿ ಗ್ರಾಮ ಪಂಚಾಯಿತಿಯಲ್ಲಿ ಇಡದೆ ತನ್ನ ಅತ್ತೆ ಮನೆಯಲ್ಲಿ ಶೇಖರಿಸಿಟ್ಟಿದ್ದು ತಪ್ಪು. ಇದು ನಿರಾಶ್ರಿತರಿಗೆ ತಲುಪುತ್ತಿರಲಿಲ್ಲ. ಈ ಸದಸ್ಯನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಗ್ರಾಮಸ್ಥರು ನಿರಾಶ್ರಿತರಿಗೆ ಸೇರಿದ ಆಹಾರ ಸಾಮಗ್ರಿಗಳು ಉಳ್ಳವರ ಪಾಲಾಗುತ್ತಿದೆ. ಹರದೂರಿನ ಮಾಜಿ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ನಿರಾಶ್ರಿತರಿಗೆ ವಿತರಿಸಬೇಕಾದ ಅಕ್ಕಿ, ಕಂಬಳಿ, ಬಟ್ಟೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.