ನಾಪೆÇೀಕ್ಲು, ಸೆ. 7: ಜಲಪ್ರಳಯದಿಂದ ತತ್ತರಿಸಿದ ಕೊಡಗು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆತರಲು ಸದ್ಯದಲ್ಲಿಯೇ ದೆಹಲಿಗೆ ನಿಯೋಗದೊಂದಿಗೆ ತೆರಳುವದಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ಟೀಕಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿದ ಅವರು ಪ್ರಧಾನಿ ಮೋದಿ ಇಡೀ ದೇಶದ ಜನರ ಪ್ರಧಾನಿಯಾಗಿದ್ದಾರೆ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವದು ಕೂಡ ಅವರ ಕರ್ತವ್ಯವಾಗಿದೆ. ಪ್ರಕೃತಿ ವಿಕೋಪದಲ್ಲಿ ಉಂಟಾದ ಸಾವು ನೋವು, ನಷ್ಟಗಳ ಬಗ್ಗೆ ವರದಿ ತರಿಸಿಕೊಂಡು ಅವರೇ ಖುದ್ದು ಭೇಟಿ ನೀಡಬೇಕಾಗಿರುವದು ಅವರ ಜವಾಬ್ದಾರಿಯೂ ಆಗಿದೆ. ಚುನಾವಣಾ ಸಂದರ್ಭದಲ್ಲಿ ಎಲ್ಲೆಡೆಗೆ ಭೇಟಿ ನೀಡುವ ಅವರಿಗೆ ಜನರ ಕಷ್ಟವನ್ನು ಅರಿಯಲು ನಿಯೋಗದೊಂದಿಗೆ ಭೇಟಿ ನೀಡಿ ಮನವೊಲಿಸುವ ಅಗತ್ಯ ಉಂಟೇ? ಎಂದು ಅವರು ಪ್ರಶ್ನಿಸಿದ್ದಾರೆ.