ಶ್ರೀಮಂಗಲ, ಸೆ. 7: ಉತ್ತರ ಕೊಡಗಿನಲ್ಲಿ ಉಂಟಾಗಿರುವ ಭೀಕರ ಪ್ರಕೃತಿ ವಿಕೋಪದಿಂದ ಭೂಕುಸಿತ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಾಫಿ ತೋಟ ಮತ್ತು ಕೃಷಿ ಭೂಮಿಗಳು ಹಾನಿಯಾಗಿದ್ದು, ಅವುಗಳನ್ನು ಸೇನಾ ನೆರವು ಪಡೆದು ಕೃಷಿ ಯೋಗ್ಯವಾಗಿ ಮಾಡಲು ರಕ್ಷಣಾ ಸಚಿವರೊಂದಿಗೆ ವ್ಯವಹಾರ ನಡೆಸಲಾಗುತ್ತಿದೆ. ಯಾವದೇ ಕಾರಣಕ್ಕೆ ಇಲ್ಲಿನ ಸಂತ್ರಸ್ತ ಕೃಷಿಕರು ವಿಚಲಿತರಾಗಿ ಜಾಗವನ್ನು ಮಾರಾಟ ಮಾಡದಂತೆ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಕರೆ ನೀಡಿದ್ದಾರೆ.
ಪೊನ್ನಂಪೇಟೆಯ ಕೊಡಗು ವನ್ಯ ಜೀವಿ ಸಂಘದ ಕಚೇರಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕೃಷಿ ಜಾಗದ ಮೇಲೆ ಗುಡ್ಡಗಳು ಕುಸಿದು ಬೃಹತ್ ಮಣ್ಣು ತುಂಬಿಕೊಂಡಿದ್ದು, ಹಾಗೆಯೇ ತೋಟಗಳ ಹಲವು ಪದರುಗಳು ಸೀಳಿ ಕೊಚ್ಚಿ ಹೋಗಿದ್ದು, ಅಂತಹ ಜಾಗದ ಮಣ್ಣಿನಲ್ಲಿ ಅಮ್ಲೀಯ ಗುಣವಿದ್ದು ಅಲ್ಲಿ ತೋಟ ಅಥವಾ ಭತ್ತದ ಕೃಷಿ ಮಾಡಲು ಸಾಧ್ಯವಾಗುವದಿಲ್ಲ. ಅಂತಹ ಜಾಗದ ಮೇಲ್ಪದರವನ್ನು ಕೃಷಿ ಯೋಗ್ಯವಾಗಿ ಮಾಡಲು ಬಹಳ ಕಷ್ಟವಿದೆ. ಆದರೆ, ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ನೆರವು ಪಡೆದು ಸೇನೆ ಉಪಯೋಗಿಸುವ ಬೃಹತ್ ಯಂತ್ರಗಳನ್ನು ಬಳಸಿ ಈ ಪ್ರದೇಶವನ್ನು ಕೃಷಿ ಯೋಗ್ಯ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವರೊಂದಿಗೆ ಕೊಡಗು ವನ್ಯ ಜೀವಿ ಸಂಘ ಹಾಗೂ ನಿವೃತ್ತ ಸೈನಿಕ ಸಂಘದಿಂದ ವ್ಯವಹರಿಸಲಾಗುತ್ತಿದೆ. ಆದ್ದರಿಂದ ಕೃಷಿ ಭೂಮಿಯನ್ನು ಕಳೆದುಕೊಂಡಿರುವ ಕೃಷಿಕರು ವಿಚಲಿತರಾಗಿ ಮತ್ತು ದುಡುಕಿ ತಮ್ಮ ಆಸ್ತಿಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದರು.
ಈಗಾಗಲೇ ಪ್ರಕೃತಿ ವಿಕೋಪದಿಂದ ಕೃಷಿ ಜಾಗ ಕಳೆದುಕೊಂಡಿರುವ ಹಾಗೂ ಹಾನಿಯಾಗಿರುವ ಪ್ರದೇಶದಲ್ಲಿ ಈ ಸಂಕಷ್ಟದ ದುರ್ಲಾಭವನ್ನು ಪಡೆದು ಕೆಲವು ರಿಯಲ್ ಎಸ್ಟೇಲ್ ಮಾಫಿಯಾ ಮತ್ತು ರಾಜಕಾರಣಿಗಳು ಇಲ್ಲಿನ ಜನರಲ್ಲಿ ಆತಂಕವನ್ನು ಸೃಷ್ಟಿಸಿ ಜಾಗ ಮಾರಾಟ ಮಾಡುವಂತೆ ಪ್ರೇರೇಪಿಸುತ್ತಿದ್ದು, ಅಂತವರ ಮಾತಿಗೆ ಮರುಳಾಗಿ ಖಾಸಗಿಯವರಿಗಾಗಲಿ ಸರ್ಕಾರಕ್ಕೆ ಆಗಲಿ ಮಾರಾಟ ಮಾಡಬಾರದೆಂದು ಕಿವಿಮಾತು ಹೇಳಿದರು.