ಕುಶಾಲನಗರ, ಸೆ. 7: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕುಶಾಲನಗರದ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಸ್ಥಳೀಯ ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರನ್ನು ಭೇಟಿ ಮಾಡಿದ ವೀಣಾ ಅಚ್ಚಯ್ಯ, ಕೆ.ಪಿ. ಚಂದ್ರಕಲಾ, ಟಿ.ಪಿ.ರಮೇಶ್ ಮತ್ತು ಕಾಂಗ್ರೆಸ್ ಮುಖಂಡರು ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭ ಅವರೊಂದಿಗೆ ತಮ್ಮ ಅಳಲು ತೋಡಿಕೊಂಡು ಹಲವು ಸಂತ್ರಸ್ತರು ತಮ್ಮ ಗ್ರಾಮಗಳಲ್ಲಿಯೇ ಆಶ್ರಯ ಕೇಂದ್ರ ಆರಂಭಿಸಿ ತಂಗಲು ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಕೋರಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀಣಾ ಅಚ್ಚಯ್ಯ, ಗುಡ್ಡ ಪ್ರದೇಶಗಳಲ್ಲಿ ವಾಸವಾಗಿದ್ದ ಸಂತ್ರಸ್ತರು ಮರಳಿ ತಮ್ಮ ಗ್ರಾಮಗಳಿಗೆ ತೆರಳಲು ಆತಂಕಪಡುತ್ತಿದ್ದಾರೆ. ಸುರಕ್ಷಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಪರ್ಯಾಯ ನಿವೇಶನ ಒದಗಿಸುವ ಸಂಬಂಧ ಸರಕಾರ ಹಾಗೂ ಜಿಲ್ಲಾಡಳಿತ ಪರಿಶೀಲನೆ ನಡೆಸುತ್ತಿದೆ. ಮಾದಾಪುರ, ಕರ್ಣಂಗೇರಿ ಪ್ರದೇಶದಲ್ಲಿ ನಿವೇಶನ ಒದಗಿಸಲು ಸ್ಥಳ ಪರಿಶೀಲನೆ ಕೈಗೊಳ್ಳಲಾಗಿದ್ದು ಶೀಘ್ರದಲ್ಲಿಯೇ ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ವಿ.ಪಿ.ಶಶಿಧರ್, ಹೆಚ್.ಜೆ. ಕರಿಯಪ್ಪ, ಅಬ್ದುಲ್ ಖಾದರ್, ಕೆ.ಎನ್.ಅಶೋಕ್ ಮತ್ತಿತರರು ಇದ್ದರು.