ಸೋಮವಾರಪೇಟೆ, ಸೆ. 7: ಮಹಿಳಾ ಗುಂಪುಗಳಿಗೆ ವಿವಿಧ ಮೈಕ್ರೋ ಫೈನಾನ್ಸ್‍ಗಳಿಂದ ನೀಡಲಾಗಿರುವ ಸಾಲ ವಸೂಲಾತಿಗೆ ಕಂಪನಿಯವರು ಕಿರುಕುಳ ನೀಡುತ್ತಿದ್ದು, ಪ್ರಕೃತಿ ವಿಕೋಪದಿಂದ ಕೂಲಿ ಕೆಲಸವೂ ಇಲ್ಲದಾಗಿರುವ ಹಿನ್ನೆಲೆ, ಸಾಲ ಮರುಪಾವತಿಗೆ ಸಮಯಾವಕಾಶ ನೀಡಬೇಕೆಂದು ನೂರಾರು ಮಹಿಳೆಯರು ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನಲ್ಲಿ ಸುರಿದ ಮಹಾಮಳೆಗೆ ತೋಟಗಳಲ್ಲಿ ಕೂಲಿ ಕೆಲಸ ಸ್ಥಗಿತಗೊಂಡಿದ್ದು, ಕಾರ್ಮಿಕರ ಕುಟುಂಬ ಸಂಕಷ್ಟಕ್ಕೆ ಒಳಗಾಗಿದೆ. ಕುಟುಂಬ ನಿರ್ವಹಣೆಗೆ ದುಸ್ತರವೆನಿಸಿರುವ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಇತರ ಸಂಘ ಸಂಸ್ಥೆಗಳ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಕಾರ್ಮಿಕರ ಹಿತ ಕಾಪಾಡಬೇಕೆಂದು ಎನ್.ಕೆ. ರೇಷ್ಮಾ, ಭಾಗ್ಯ, ಸರೋಜ, ಕಮಲಮ್ಮ, ಯಶೋಧ, ನೇತ್ರಾವತಿ ಸೇರಿದಂತೆ ಇತರರು ತಹಶೀಲ್ದಾರ್‍ಗೆ ಮನವಿ ಮಾಡಿದರು.
ನಾವುಗಳು ಸಾಲ ಮರುಪಾವತಿಸಲು ಸಿದ್ಧರಿದ್ದು ಕನಿಷ್ಟ ಮೂರು ತಿಂಗಳ ಸಮಯಾವಕಾಶ ನೀಡಬೇಕು. ಸಂಬಂಧಿಸಿದ ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ಸರ್ಕಾರದಿಂದಲೆ ಈ ಬಗ್ಗೆ ಆದೇಶ ಹೊರಡಿಸಬೇಕು. ತಪ್ಪಿದ್ದಲ್ಲಿ ಅನೇಕ ಬಡ ಕೂಲಿ ಕಾರ್ಮಿಕ ಕುಟುಂಬಗಳು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಪ್ರಮುಖರಾದ ಬಿ.ಆರ್.ಮಹೇಶ್, ಪಿ.ಕೆ. ಚಂದ್ರು, ಪ್ರಮೋದ್, ಮೋಹನ್, ಶುಭಾಕರ, ದಾಕ್ಷಾಯಿಣಿ, ಸಂದೀಪ್, ಕಿರಣ್, ಜಯಾನಂದ ಸೇರಿದಂತೆ ಇತರರು ತಹಶೀಲ್ದಾರ ಗಮನ ಸೆಳೆದರು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ತಮ್ಮ ಅಹವಾಲನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದರು. ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯ ವಿವಿಧ ಸ್ತ್ರೀಶಕ್ತಿ ಸಂಘಟನೆಗಳ ನೂರಾರು ಮಂದಿ ಮಹಿಳೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.