ಮಡಿಕೇರಿ, ಸೆ. 7: ಬೆಂಗಳೂರಿನ ಗ್ರೂಫ್ ಸೆಂಟರ್‍ನ ಕೇಂದ್ರ ಮೀಸಲು ಪೊಲೀಸ್ ಪಡೆ ವತಿಯಿಂದ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಅಕ್ಕಿ, ಸಕ್ಕರೆ, ಬೇಳೆ, ಬಟ್ಟೆ ಸೋಪು, ಮೈಸೋಪು, ಕೋಲ್‍ಗೇಟ್, ವಿಮ್, ಕೈತೊಳೆಯುವ ಸೋಪು, ಗುಡ್‍ನೈಟ್, ಮೈದಾ, ಮೆಣಸಿನ ಹುಡಿ, ಅಮೃತಾಂಜನ, ಬೇಬಿ ಪೌಡರ್, ರಸ್ಕ್ ಹೀಗೆ ನಾನಾ ಬಗೆಯ ಆಹಾರ ಹಾಗೂ ಇತರೆ ಸಾಮಗ್ರಿಗಳನ್ನು ಜಿಲ್ಲಾಡಳಿತ ಭವನದಲ್ಲಿರುವ ದಾಸ್ತಾನು ಕೇಂದ್ರಕ್ಕೆ ನೀಡಲಾಗಿದೆ. ಸಿಆರ್‍ಪಿ ಎಫ್‍ನ ಅಸಿಸ್ಟೆಂಟ್ ಕಮಾಂಡೆಂಟ್ ವೆಂಕಟಗಿರಿ ಅವರ ನೇತೃತ್ವದಲ್ಲಿ ಆಹಾರ ಸಾಮಗ್ರಿ ಮತ್ತು ಇತರ ಅಗತ್ಯ ವಸ್ತುಗಳನ್ನು ದಾಸ್ತಾನು ಕೇಂದ್ರಕ್ಕೆ ನೀಡಲಾಯಿತು.
ಹಸು ರಕ್ಷಣೆ: ಆಗಸ್ಟ್ 17 ರಂದು ಮಳೆ ಹೆಚ್ಚಾಗಿ ಪ್ರವಾಹದ ಭೀತಿ ಯಿಂದ ಮನೆಯವರೆಲ್ಲ ಮನೆ ಬಿಟ್ಟು ಹೊರಗಡೆ ಸುರಕ್ಷಿತ ಸ್ಥಳಕ್ಕೆ ಹೋಗಿ ದ್ದಾಗ ಸಿಆರ್‍ಪಿಎಫ್ ತಂಡ ತೆರಳಿ ಹಸುವನ್ನು ಸುರಕ್ಷಿತವಾಗಿ ಕರೆತಂದು ಮನೆಯವರಿಗೆ ಒಪ್ಪಿಸಿದ್ದಾರೆ.
ತೀವ್ರ ಅತಿವೃಷ್ಟಿಯಿಂದಾಗಿ ಮಡಿಕೇರಿ-ಸಂಪಾಜೆ ಮಾರ್ಗದ ರಸ್ತೆ ಹಾನಿಯಾಗಿದ್ದು, ಆ ನಿಟ್ಟಿನಲ್ಲಿ ಎರಡನೇ ಮೊಣ್ಣಂಗೇರಿ ಬಳಿ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶದಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ಕಾರ್ಯದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಬೆಂಗಳೂರು ವಿಭಾಗದ ತಂಡದವರು ಪಾಲ್ಗೊಂಡು ರಸ್ತೆ ತ್ವರಿತ ನಿರ್ವಹಣೆಗೆ ಸಹಕಾರಿಯಾದರು.