ಮಡಿಕೇರಿ, ಸೆ. 7: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆಯ ವತಿಯಿಂದ ವರ್ಷಂಪ್ರತಿ ಅದ್ದೂರಿಯೊಂದಿಗೆ ಆಚರಿಸಲಾಗುತ್ತಿದ್ದು, ಕೈಲ್ ಮುಹೂರ್ತ ಹಬ್ಬದ ಸಾರ್ವತ್ರಿಕ ಆಚರಣೆಯನ್ನು ಇತ್ತೀಚೆಗೆ ಸರಳವಾಗಿ ಆಚರಿಸಲಾಯಿತು. ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ವಾಹನ ಮೆರವಣಿಗೆ ಯಂತಹ ಕಾರ್ಯಕ್ರಮ ವನ್ನು ಕೈಬಿಟ್ಟು ಮಡಿಕೇರಿಯ ಕೊಡವ ಮಂದ್ನಲ್ಲಿ ಆಯುಧ ಪೂಜೆ ಹಾಗೂ ಇತರ ಸಂಪ್ರದಾಯವನ್ನು ಮಾತ್ರ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಮಾತನಾಡಿ, ಈ ಬಾರಿಯ ದುರಂತದಿಂದಾಗಿ ಏಳು ಕೊಡವ ನಾಡ್ಗಳ ಜನರು ಸಂತ್ರಸ್ತರಾಗಿದ್ದು, ಅಪಾರ ಹಾನಿಯುಂಟಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂ. 30 ಸಾವಿರ ಕೋಟಿ ವಿಶೇಷ ಪ್ಯಾಕೇಜ್ನ ಮೂಲಕ ಸಂತ್ರಸ್ತರಿಗೆ ಪುನರ್ವಸತಿಯೊಂದಿಗೆ ಈ ಹಿಂದಿನಂತೆ ಆಶ್ರಯ ಕಲ್ಪಿಸಬೇಕೆಂದು ಒತ್ತಾಯಿಸಿದರು. ಬಳಿಕ ಸಂಘಟನೆಯ ಪ್ರಮುಖರು ಸಂತ್ರಸ್ತರಾದವರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.