ಸಿದ್ದಾಪುರ, ಸೆ. 7: ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡು ಭಾಗದ ನದಿದಡದ ನಿವಾಸಿಗಳು ಪುನರ್ವಸತಿ ಕಲ್ಪಿಸಿ ಕೊಟ್ಟಲ್ಲಿ ತಾವುಗಳು ತೆರಳುವದಾಗಿ ಜಿಲ್ಲಾಡಳಿತಕ್ಕೆ ಸ್ವಯಂಪ್ರೇರಿತವಾಗಿ ಮನವಿ ಪತ್ರ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆ ಸಮಿತಿಯ ಸಂಚಾಲಕ ವಿ.ಕೆ. ಲೋಕೇಶ್ ಕಳೆದ ಸುಮಾರು ವರ್ಷಗಳಿಂದ ನೆಲ್ಲಿ ಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನದಿದಡದಲ್ಲಿ ನೂರಾರು ಮಂದಿ ನಿವಾಸಿಗಳು ವಾಸ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಪ್ರವಾಹ ನೀರು ಏರಿಕೆಯಾದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಸ್ಥಳೀಯ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿತ್ತು. ಜಿಲ್ಲಾಡಳಿತ ವರ್ಷಂಪ್ರತಿ ಪರಿಹಾರ ಕೇಂದ್ರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿತ್ತು. ಆದರೆ ಈ ಬಾರಿಯ ಮಹಾಮಳೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟದಲ್ಲಿ ಏರಿಕೆಯಾಗಿ ನೂರಾರು ಮನೆಗಳು ಜಲಾವೃತಗೊಂಡಿತ್ತು. ಅಲ್ಲದೇ ನದಿ ದಡದ ಮನೆಗಳು ಶಿಥಿಲಗೊಂಡು ಬಿರುಕು ಕಾಣಿಸಿಕೊಂಡಿದೆ.
ಈ ಹಿನ್ನೆಲೆ ನೆರೆ ಸಂತ್ರಸ್ತರ ಪುನರ್ವಸತಿ ಸಮಿತಿಯ ಪದಾಧಿಕಾರಿಗಳು ಬೆಟ್ಟದಕಾಡು ವ್ಯಾಪ್ತಿಯ ನದಿದಡದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿಕೊಂಡ ಮೇರೆಗೆ ಆ ಭಾಗದ ನದಿದಡದ ನಿವಾಸಿಗಳು ತಮಗೆ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿ ಕೊಂಡಿರುವ ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿ ಸುರಕ್ಷಿತ ಸ್ಥಳದಲ್ಲಿ ಶಾಶ್ವತ ಸೂರು ಒದಗಿಸಿಕೊಡುವಂತೆ ಮನವಿ ಪತ್ರಕ್ಕೆ ಸಹಿ ಹಾಕಿ ಸ್ಥಳಾಂತರಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆಂದು ಲೋಕೇಶ್ ಮಾಹಿತಿ ನೀಡಿದರು. ಸಂತ್ರಸ್ತರು ನೀಡಿದ ಮನವಿ ಪತ್ರವನ್ನು ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ನೀಡಲಾಗಿ ದೆಂದರು. ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಜಿಲ್ಲಾಡಳಿತ ದಿಂದ ಸಹಕಾರ ನೀಡಿ ಪುನರ್ವಸತಿಗೆ ಶ್ರಮಿಸುವದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರಿಗೂ ಮನವಿ ಪತ್ರ ಸಲ್ಲಿಸಿ ಅವರ ಸಹಕಾರ ನೀಡುವದಾಗಿ ತಿಳಿಸಿದರು. ನದಿದಡದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿದ ನಂತರ ನದಿದಡವನ್ನು ಅಗಲೀಕರಣ ಗೊಳಿಸುವ ಮೂಲಕ ಕಾವೇರಿ ನದಿಯಲ್ಲಿ ಶುಚಿತ್ವ ಕಾಪಾಡಲು ಅನುಕೂಲವಾಗುತ್ತದೆಂದು ಲೋಕೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಿತಿಯ ಪ್ರಮುಖರಾದ ಮಣಿ, ಮಹಮ್ಮದ್ ಮಾತನಾಡಿ ನದಿದಡದ ನಿವಾಸಿಗಳು ಅನೇಕ ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಈಗಾಗಲೇ ಬೆಟ್ಟದಕಾಡು ವಿಭಾಗ ದಲ್ಲಿರುವ ನಿವಾಸಿಗಳು ಪುನರ್ವ ಸತಿಗಾಗಿ ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರಾದರೂ ಭೂ ಹಿಡುವಳಿದಾರರು ಮುಂದೆ ಬಂದು ಸ್ಥಳಾವಕಾಶ ನೀಡಿದ್ದಲ್ಲಿ ಬಡ ಜನತೆಗೆ ಸಹಾಯವಾದಂತಾಗುತ್ತದೆಂದು ತಿಳಿಸಿದರು. ಪದಾಧಿಕಾರಿಗಳಾದ ವಸಂತ್ಕುಮಾರ್ ಹೊಸಮನೆ ಹಾಗೂ ಟಿ.ಸಿ. ಅಶೋಕ್ ಹಾಜರಿದ್ದರು.