ಶನಿವಾರಸಂತೆ, ಸೆ. 7: ಹಂಡ್ಲಿ ಗ್ರಾಮ ಪಂಚಾಯಿತಿ ಗ್ರಾಮಸಭೆ ಇತ್ತೀಚೆಗೆ ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎನ್. ಸಂದೀಪ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸರಕಾರದಿಂದ ಹಂಡ್ಲಿ ಗ್ರಾಮ ಪಂಚಾಯಿತಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಲಾಗಿದೆ. ಸದಸ್ಯರುಗಳು ತಮ್ಮ ತಮ್ಮ ವಾರ್ಡ್ಗಳನ್ನು ಅಭಿವೃದ್ಧಿಪಡಿಸಲು ಗ್ರಾಮದ ಜನತೆಯ ಸಹಾಯ ಸಹಕಾರ ಕೋರಿದ್ದು, ಅದರಂತೆ ಜನರು ಸಹಕಾರ ನೀಡಿರುತ್ತಾರೆ ಎಂದು ಅಧ್ಯಕ್ಷರು ಭಾಷಣದಲ್ಲಿ ಹೇಳಿದರು.
ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದಿಂದ ತುಂಬಾ ಹಾನಿಯಾಗಿ ಮನೆ, ಪ್ರಾಣ, ತೋಟ-ಗದ್ದೆಗಳನ್ನು ಕಳೆದುಕೊಂಡಿದ್ದಾರೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಅತೀ ಮಳೆಯಿಂದಾಗಿ ಕಾಫಿ, ಕಾಳುಮೆಣಸು, ಭತ್ತದ ಸಸಿ, ಇತರ ಬೆಳೆಗಳು ನಷ್ಟವಾಗಿವೆ. ಈ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕೃಷಿಕರಿಗೆ ಪರಿಹಾರ ನೀಡಬೇಕು ಎಂದು ಮಾಜಿ ಜಿ.ಪಂ. ಅಧ್ಯಕ್ಷೆ ಹೆಚ್.ಬಿ. ಜಯಮ್ಮ ಹೇಳಿದರು.
ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿ ನೀಡಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕೃಷಿ, ಆಹಾರ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಈ ಬಗ್ಗೆ ಗ್ರಾಮಸ್ಥ ವೀರೇಂದ್ರ ಆಕ್ಷೇಪ ವ್ಯಕ್ತಪಡಿಸಿದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಮಿತಾ ಮಾತನಾಡಿ, ಇಲಾಖೆಗಳ ಅಧಿಕಾರಿ ಗಳನ್ನು ಗ್ರಾಮಸಭೆಗೆ ಪಂಚಾಯಿತಿ ವತಿಯಿಂದ ಆಹ್ವಾನಿಸಲಾಗಿದೆ ಎಂದು ಹೇಳಿದರು. ಜಿ.ಪಂ. ಸದಸ್ಯ ಸಿ.ಪಿ. ಪುಟ್ಟರಾಜು ಮಾತನಾಡಿ, ಸರಕಾರದಿಂದ ದೊರೆಯುವ ಸವಲತ್ತುಗಳ ಮಾಹಿತಿ ಪಡೆಯಲು ಗ್ರಾಮಸಭೆಯನ್ನು ನಡೆಸಲಾಗುತ್ತದೆ. ಆದರೆ ಫಲಾನುಭವಿಗಳಿಗೆ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳ ಸಭೆಗೆ ಗೈರು ಹಾಜರಾದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಓಗೆ ದೂರು ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಸಲಹೆ ನೀಡಿದರು.
ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ, ನೋಡಲ್ ಅಧಿಕಾರಿ ಪಶುವೈದ್ಯಾಧಿಕಾರಿ ಎಂ. ಲತ ಮಾತನಾಡಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೂಪಾ ದಿನೇಶ್, ಸದಸ್ಯರುಗಳಾದ ಪವಿತ್ರ, ಶಿವಮ್ಮ, ವಾಣಿ ಗಿರೀಶ್, ಮಾದೇವಿ, ನಿರ್ಮಲ, ಕಂಪ್ಯೂಟರ್ ನಿರ್ವಾಹಕಿ ವಾಣಿ, ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮಸ್ಥರಾದ ಕೆ.ಬಿ. ವೇಣುಕುಮಾರ್, ವೀರೇಂದ್ರಕುಮಾರ್, ಟಿ.ಟಿ. ಮಂಜುನಾಥ ಲೋಕೇಶ್ ಇತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಮಿತಾ, ಸ್ವಾಗತಿಸಿ, ನಿರೂಪಿಸಿದರು. ಸದಸ್ಯೆ ವಾಣಿ ಗಿರೀಶ್ ವಂದಿಸಿದರು.