ಮಡಿಕೇರಿ, ಸೆ. 7: ಪ್ರಕೃತಿ ವಿಕೋಪದಿಂದ ನೆಲೆ ಕಳೆದು ಕೊಂಡಿರುವ ಕೊಡಗಿನ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಾ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿರುವ ಜಮಾಅತೆ ಇಸ್ಲಾಮೀ ಹಿಂದ್‍ನ ಸಮಾಜಸೇವಾ ವಿಭಾಗ ಹ್ಯುಮಾನಿ ಟೇರಿಯನ್ ರಿಲೀಫ್ ಸೊಸೈಟಿ 650 ಕ್ಕೂ ಅಧಿಕ ಕುಟುಂಬಗಳ ನೋವಿಗೆ ಸ್ಪಂದಿಸಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮುಖರು, ಹೆಚ್.ಆರ್.ಎಸ್.ನ ಕಾರ್ಯಕರ್ತರು ಈಗಾಗಲೇ ಎಲ್ಲಾ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಮೂಲಕ ನೊಂದವರÀ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು. ಮಡಿಕೇರಿಯ ಕಾರುಣ್ಯ ಸೆಂಟರ್‍ನಲ್ಲಿ ಕೊಡಗು ರಿಲೀಫ್ ಸೆಲ್ ಸ್ಥಾಪಿಸಿ ಪರಿಹಾರ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

ಪ್ರವಾಹಕ್ಕೆ ತುತ್ತಾದ ಸುಮಾರು 20 ಮನೆಗಳನ್ನು ಶುಚಿಗೊಳಿಸಲಾಗಿದೆ. ಓರ್ವ ವಿಧವಾ ಸಂತ್ರಸ್ತೆಗೆ ರೂ. 1.50 ಲಕ್ಷ ಮೌಲ್ಯದ ಮನೆಯನ್ನು ನಗರದ ತ್ಯಾಗರಾಜ ಬಡಾವಣೆಯಲ್ಲಿ ನೀಡಲಾಗಿದೆ. ಓರ್ವ ವೆಲ್ಡರ್‍ಗೆ ಜೀವನ ನಿರ್ವಹಣೆಗೋಸ್ಕರ ವೆಲ್ಡಿಂಗ್ ಯಂತ್ರವನ್ನು ವಿತರಿಸಲಾಗಿದೆ. ಎರಡು ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ನಡೆಸಲಾಗಿದೆ. ಒಬ್ಬ ಸಂತ್ರಸ್ತನಿಗೆ ಜೀವನ ನಿರ್ವಹಣೆಗಾಗಿ ಆಟೋರಿಕ್ಷಾ ಒಂದನ್ನು ನೀಡಲಾಗಿದೆ. ಇನ್ನು ಮುಂದೆಯೂ ಹೆಚ್.ಆರ್.ಎಸ್.ನಿಂದ ಸೇವಾ ಕಾರ್ಯಗಳು ಮುಂದುವರಿಯಲಿದೆ ಎಂದು ತಿಳಿಸಿದರು. ಸಂತ್ರಸ್ತರ ಮಕ್ಕಳು ವಿದ್ಯಾಭ್ಯಾಸ ಪಡೆಯುವ ವೃತ್ತಿಪರ ಕಾಲೇಜುಗಳೂ ಸೇರಿ ಸಂಬಂಧಪಟ್ಟ ಸಂಸ್ಥೆಗಳಿಗೆ ಶುಲ್ಕ ವಿನಾಯಿತಿ ಬಗ್ಗೆ ನಿರ್ದೇಶಿಸಬೇಕು. ಎಲ್ಲಾ ಬಗೆಯ ವಿದ್ಯಾರ್ಥಿ ವೇತನಗಳಿಗೆ ನಿಗದಿ ಪಡಿಸಿರುವ ಅವಧಿಯನ್ನು ವಿಸ್ತರಣೆ ಗೊಳಿಸಲು ಸರಕಾರದ ಗಮನಹರಿಸಬೇಕು.

ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮುಂತಾದ ಸಾರ್ವಜನಿಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ನಿರಾಯಾಸವಾಗಿ ಪರೀಕ್ಷೆಗೆ ಕುಳಿತು ಕೊಳ್ಳುವಂತೆ ಪರೀಕ್ಷಾ ಮಂಡಳಿಗಳಿಗೆ ತಿಳಿಯಪಡಿಸುವದು. ಧರ್ಮಸ್ಥಳ ಗ್ರಾಮೀಣ ಹಣಕಾಸು ಸಂಸ್ಥೆಗಳಂತಹ ಸ್ವ-ಸಹಾಯ ಸಂಸ್ಥೆಗಳಿಂದ, ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾರ್ವಜನಿಕರು ಪಡೆದಿರುವ ಸಾಲಗಳ ವಸೂಲಾತಿ ಬಗ್ಗೆ ನಿಬಂಧನೆ ಸಡಿಲಗೊಳಿಸುವದು. ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಅಸಲಿನ ಮರುಪಾವತಿಗೆ ಕನಿಷ್ಟ ಒಂದು ವರ್ಷದ ಅವಧಿ ನೀಡಬೇಕಾಗಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು. ಉದ್ಯೋಗ ಕಳೆದು ಕೊಂಡವರಿಗೆ ಮರಳಿ ಉದ್ಯೋಗ ಕಲ್ಪಿಸಬೇಕು.

ಜಿಲ್ಲೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‍ಗಳ ನಿರ್ಮಾಣದ ಮೇಲೆ ನಿಯಂತ್ರಣ ಹೇರಬೇಕು ಮತ್ತು ಈ ಬಗೆಗಿನ ಪರವಾನಗಿ ಮೇಲೆ ಷರತ್ತು ಗಳನ್ನು ಪಾಲಿಸುತ್ತಿದ್ದಾರೆಯೇ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು.

ಕೊಡಗನ್ನು ಪ್ರವಾಸಿ ತಾಣವಾಗಿಯೇ ಉಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ವಿನಾಕಾರಣ ಹಾಳು ಬಿಟ್ಟಿರುವ ಕೃಷಿಭೂಮಿ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಕೃಷಿ ಭೂಮಿಯಲ್ಲಿ ಕೃಷಿ ಕಾರ್ಯ ನಡೆಸು ವಂತೆ ಜನರನ್ನು ಪ್ರೋತ್ಸಾಹಿಸಬೇಕು. ಕೃಷಿ ಭೂಮಿಯನ್ನು ವಾಣಿಜ್ಯ ಉಪಯೋಗಕ್ಕಾಗಿ ಪರಿವರ್ತಿಸು ವದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಮನವಿಯಲ್ಲಿ ತಿಳಿಸಿರುವದಾಗಿ ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರ್ಕಡ, ವಲಯ ಮೇಲ್ವಿಚಾರಕ ಯು. ಅಬ್ದುಸ್ಸಲಾಂ, ಜಿಲ್ಲಾ ಮೇಲ್ವಿಚಾರಕ ಸಿ.ಹೆಚ್. ಅಫ್ಸರ್, ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್, ಪ್ರಮುಖರಾದ ಜಿ.ಹೆಚ್. ಮಹಮ್ಮದ್ ಹನೀಫ್ ಹಾಗೂ ಮುಹಮ್ಮದ್ ಉಪಸ್ಥಿತರಿದ್ದರು.