ಮಡಿಕೇರಿ, ಸೆ. 7: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಸಂಭವಿಸಿರುವ ಅನಾಹುತ ಪ್ರಾಕೃತಿಕ ವಿಕೋಪದಂತಹ ಘಟನೆಗಳು ಹಲವಾರು ಬೆಳವಣಿಗೆಗಳಿಗೂ ಕಾರಣವಾಗುತ್ತಿದೆ. ಇತ್ತೀಚೆಗೆ ನಡೆದ ದುರಂತದ ಹಿನ್ನೆಲೆಯಲ್ಲಿ ಸಂತ್ರಸ್ತರಾದವರಿಗೆ ಸಾಧ್ಯವಾಗುವಂತಹ ಎಲ್ಲಾ ರೀತಿಯ ನೆರವು ನೀಡುವದು, ಶಿಕ್ಷಣ ಉದ್ಯೋಗದಂತಹ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ಮೂಲದ ಕೆಲವು ಯುವಕ - ಯುವತಿಯರು ಸೇರಿ, ‘ಕೊಡಗು ಫಾರ್ ಟುಮಾರೊ’ ಎಂಬ ಸ್ವಯಂ ಸೇವಕರನ್ನು ಒಳಗೊಂಡ ತಂಡವೊಂದನ್ನು ರಚಿಸಿದ್ದಾರೆ. ಈ ತಂಡದಲ್ಲಿ ಜಿಲ್ಲೆಯವರು, ಹೊರಜಿಲ್ಲೆ, ನಗರಪ್ರದೇಶ ಹಾಗೂ ವಿದೇಶಗಳಲ್ಲಿ ನೆಲಸಿರುವವರೂ ಇದ್ದು, ಭವಿಷ್ಯದ ಹಿತಚಿಂತನೆಯೊಂದಿಗೆ ಜಿಲ್ಲೆಯ ಪರವಾಗಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ. ಸದ್ಯದ ಮಟ್ಟಿಗೆ ತುರ್ತಾಗಿ ಈ ಬಾರಿ ದುರಂತದಲ್ಲಿ ನೊಂದವರಿಗೆ ಸ್ಪಂದನ ನೀಡಲೂ ಈ ತಂಡದ ಸ್ವಯಂಸೇವಕರು ಯಾವದೇ ಪ್ರಚಾರ ಬಯಸದೆ ಕಾರ್ಯೋನ್ಮುಖರಾಗಿದ್ದು, ಹಲವಷ್ಟು ಮಂದಿಗೆ ನೆರವು ನೀಡಿದ್ದಾರೆ. ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಸಂತ್ರಸ್ತರಾದವರಿಗೆ ನೆರವು ನೀಡುವದರೊಂದಿಗೆ, ಶಿಕ್ಷಣ, ಉದ್ಯೋಗದಂತಹ ಅವಕಾಶಗಳನ್ನು ಕಲ್ಪಿಸಲೂ ಈ ತಂಡದ ಸದಸ್ಯರು ಶ್ರಮಿಸುತ್ತಿದ್ದಾರೆ. ವಾರಾಂತ್ಯಗಳಲ್ಲಿ ಜಿಲ್ಲೆಗೆ ಆಗಮಿಸಿ ಯಾವದೇ ಸದ್ದು - ಗದ್ದಲವಿಲ್ಲದೆ ಇಂತಹ ಕೆಲಸವನ್ನೂ ನಿರ್ವಹಿಸಿದ್ದಾರೆ.
ಇದೀಗ ಬಿಸಿಲಿನ ವಾತಾವರಣ ಕಂಡು ಬರುತ್ತಿದ್ದು, ದುರಂತ ಸಂಭವಿಸಿದ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯದ ಅಗತ್ಯವಿರುವ ಹಿನ್ನೆಲೆಯಲ್ಲಿ ಈ ತಂಡದ ಸದಸ್ಯರು ಸಾಮಾಜಿಕ ಜಾಲತಾಣಗಳ ನೆರವಿನೊಂದಿಗೆ ಇತರರನ್ನೂ ಒಗ್ಗೂಡಿಸಿಕೊಂಡು ಸ್ವಚ್ಛತಾ ಕಾರ್ಯ ನಡೆಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ತಂಡದ ಸದಸ್ಯರು ತಾ. 8 ರಂದು (ಇಂದು) ಮತ್ತು ತಾ. 9 ರಂದು ದುರಂತಗಳು ಸಂಭವಿಸಿರುವ ಸ್ಥಳಗಳಲ್ಲಿ ಸ್ವಚ್ಛತೆ ನಡೆಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.
ತಾ. 8 ರಂದು (ಇಂದು) ಬೆಳಿಗ್ಗೆ 8.30ಕ್ಕೆ ಮಡಿಕೇರಿ ಕೊಡವ ಸಮಾಜದ ಮುಂಭಾಗದಲ್ಲಿ ಸೇರಿ ಅಲ್ಲಿಂದ ವಿವಿಧ ಕಡೆಗಳಿಗೆ ತಂಡಗಳನ್ನು ರಚಿಸಿ ತೆರಳಿ ಸ್ವಚ್ಛತಾ ಕಾರ್ಯ ನಡೆಸಲಿದ್ದಾರೆ. ಕೊಡಗು ಫಾರ್ ಟುಮಾರೊದ ಸುಮಾರು 50 ರಿಂದ 60 ಮಂದಿ ಈ ಕೆಲಸಕ್ಕೆ ಮುಂದಾಗಿದ್ದು, ತಮ್ಮೊಂದಿಗೆ ಕೈಜೋಡಿಸಲು ಆಸಕ್ತಿ ತೋರುವ ಇತರರನ್ನೂ ಸೇರಿಸಿಕೊಂಡು ತುರ್ತು ಅಗತ್ಯವಿರುವ ಸ್ವಚ್ಛತೆಯನ್ನು ನಡೆಸಲು ಮುಂದಾಗಿದ್ದಾರೆ. ಇವರ ಪ್ರಯತ್ನಕ್ಕೆ ಜಿಲ್ಲಾಡಳಿತದ ಪ್ರಮುಖರು, ಕೆಲವು ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿವೆ. ತಾ. 8 ಹಾಗೂ 9 ರಂದು ನಡೆಯಲಿರುವ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಪೊನ್ನೋಲತಂಡ ಕಾವೇರಿಯಪ್ಪ (9663662191) ಅವರನ್ನು ಸಂಪರ್ಕಿಸಬಹುದು.