ಸೋಮವಾರಪೇಟೆ, ಸೆ. 9: ಇಲ್ಲಿನ ತಾಲೂಕು ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನಲ್ಲಿ ಸ್ಪಂದನಾ ರೋಟರ್ಯಾಕ್ಟ್ ಘಟಕಕ್ಕೆ ಚಾಲನೆ ನೀಡಲಾಯಿತು.
ಸಹಾಯಕ ರೋಟರ್ಯಾಕ್ಟ್ ಘಟದ ಅಧ್ಯಕ್ಷ ಮನು ಮತ್ತು ಪದಾಧಿಕಾರಿಗಳಿಗೆ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರಿ ನಾರಾಯಣ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು, ರೋಟರ್ಯಾಕ್ಟ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರೆ, ನಾಯಕತ್ವ ಗುಣಗಳು ಮತ್ತು ಸೇವಾ ಮನೋಭಾವನೆ ಮೂಡುತ್ತದೆ. ಸಮಾಜದಲ್ಲಿ ಯಾವದೇ ಕ್ಷೇತ್ರ ಕಲುಷಿತಗೊಂಡರೆ ಸಹಿಸಬಹುದು. ಆದರೆ, ಶಿಕ್ಷಣ ಕ್ಷೇತ್ರ ಕಲುಷಿತವಾದಲ್ಲಿ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ಸಂಸ್ಥೆ 1968ರಲ್ಲಿ ಪ್ರಾರಂಭವಾಗಿದ್ದು, 162 ರಾಷ್ಟ್ರಗಳಲ್ಲಿ ವಿಸ್ತರಿಸಿದೆ. 9522 ಘಟಕಗಳಿದ್ದು, 2.91 ಲಕ್ಷ 18 ರಿಂದ 30 ವರ್ಷದೊಳಗಿನ ಸದಸ್ಯರಿದ್ದಾರೆ ಎಂದರು. ಒಕ್ಕಲಿಗ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳೂ ಜ್ಞಾನ ಸಂಪಾದನೆ ಯೊಂದಿಗೆ ಸೇವಾ ಮನೋಭಾ ವದಿಂದ ಕೆಲಸ ಮಾಡಿದರೆ, ಸಾಧನೆಯ ಮೆಟ್ಟಿಲೇರಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಪಿ.ಕೆ. ರವಿ, ಪದಾಧಿಕಾರಿಗಳಾದ ಪಿ. ನಾಗೇಶ್, ರಾಕೇಶ್ ಪಟೇಲ್, ಶುಭಾಕರ್, ಜಿಲ್ಲಾ ರೋಟರಿ ಪ್ರತಿನಿಧಿ ಮಂಜೇಶ್, ಕಾಲೇಜಿನ ಪ್ರಾಂಶುಪಾಲ ಶರಣ್ ಉಪಸ್ಥಿತರಿದ್ದರು.