ಕುಶಾಲನಗರ, ಸೆ. 9: ಕುಶಾಲನಗರದ ಬಿಎಸ್‍ಆರ್ ಗ್ರೂಪ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಪಯಣ’ ಚಲನಚಿತ್ರಕ್ಕೆ ಮುಹೂರ್ತ ಪೂಜೆ ನೆರವೇರಿಸಲಾಯಿತು. ಸ್ಥಳೀಯ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಿನಿಮಾ ತಂಡ ಚಿತ್ರೀಕರಣ ಆರಂಭಿಸಿದೆ. ಬಾಲಕಾರ್ಮಿಕ, ಬಾಲ್ಯವಿವಾಹ, ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದ್ದು ತಾರಾಗಣದಲ್ಲಿ ಮಾಡೆಲ್ ಮತ್ತು ನಟರಾದ ಅಭಯ್ (ನಿಜಾಮ್) ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ಮಾಪಕರಾದ ರಾಖಿ ಮಾಹಿತಿ ನೀಡಿದ್ದಾರೆ. ಕುಶಾಲನಗರ ಟಿ.ಆರ್. ಪ್ರಭುದೇವ್ ಅವರ ಚಿತ್ರಕಥೆ, ಸಂಭಾಷಣೆ ಹೊಂದಿರುವ ಚಿತ್ರವನ್ನು ಸ್ಥಳೀಯರೆ ಆದ ಗಯಾಜ್ ನಿರ್ದೇಶಿಸುತ್ತಿದ್ದಾರೆ. ಮಧು ಆರ್ಯ ಛಾಯಾಗ್ರಹಣ, ಯೋಧ ಸಂಗೀತ ಸಂಯೋಜನೆ ಮಾಡುತ್ತಿರುವ ಚಿತ್ರದಲ್ಲಿ ಬಾಲ ನಟರಾಗಿ ಸ್ಥಳೀಯ ಪ್ರತಿಭೆಗಳಾದ ವೈಶಾಂತ್, ರಂಗಭೂಮಿ ಕಲಾವಿದರಾದ ಎಸ್. ಸ್ವಾತಿ, ಚಂದ್ರಕಲಾ, ಮೀನಾಜ್, ನವಾಜ್, ವೈಷ್ಣವಿ ನಟಿಸುತ್ತಿದ್ದಾರೆ.