ಸೋಮವಾರಪೇಟೆ, ಸೆ. 9: ಕಾನೂನಿನ ಚೌಕಟ್ಟಿನೊಳಗೆ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸಬೇಕೆಂದು ಇಲ್ಲಿನ ಪೊಲೀಸ್ ವೃತ್ತನಿರೀಕ್ಷಕ ನಂಜುಂಡೇಗೌಡ ಅವರು ಸೂಚಿಸಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ವಿವಿಧ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗವಾಗುವಂತೆ ಯಾವದೇ ಕಾರ್ಯಗಳು ನಡೆದರೂ ಸಮಿತಿಯ ಪದಾಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿದರು. ಗೌರಿ ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿದ ವೃತ್ತ ನಿರೀಕ್ಷಕರು, ಸಂಜೆ 7 ಗಂಟೆಯ ಒಳಗೆ ಉತ್ಸವ ಮೂರ್ತಿಗಳನ್ನು ವಿಸರ್ಜಿಸುವದು ಒಳಿತು ಎಂದು ಸಲಹೆ ನೀಡಿದರು.
ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಪೆಂಡಾಲ್‍ನಲ್ಲಿ ಕವಡೆ, ಇಸ್ಪೀಟ್ ಜೂಜು ಆಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವದು. ಪೆಂಡಾಲ್‍ನಲ್ಲಿ ಹೆಚ್ಚಿನ ಸುರಕ್ಷೆ ಮತ್ತು ನಿಗಾ ವಹಿಸಬೇಕು. ಉತ್ಸವ ಮೂರ್ತಿಗಳ ಮೆರವಣಿಗೆ ಸಂದರ್ಭ ಸಾರ್ವಜನಿಕರ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಬಾರದು. ಮೂರ್ತಿಗಳ ವಿಸರ್ಜನೆ ಸಂದರ್ಭ ಹೆಚ್ಚಿನ ನಿಗಾ ವಹಿಸಬೇಕು. ಪೊಲೀಸ್ ಸಿಬ್ಬಂದಿಗಳ ಅಗತ್ಯವಿದ್ದಲ್ಲಿ ಠಾಣೆಗೆ ಮಾಹಿತಿ ನೀಡಬೇಕು ಎಂದು ನಂಜುಂಡೇಗೌಡ ಅವರು ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಚಂದನ ಸುಬ್ರಮಣಿ, ಉಮೇಶ್, ಸಂತೋಷ್, ಸುಜಿತ್, ಶ್ಯಾಂಸುಂದರ್, ಜೆ.ಸಿ. ಶೇಖರ್, ಗಂಗಾಧರ್, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.