ಮಡಿಕೇರಿ, ಸೆ.9 :ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡುವಿನಲ್ಲಿ ಕೈಲು ಮುಹೂರ್ತ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಕೊಡಗು ಜಿಲ್ಲೆ ಸಂಕಷ್ಟದಲ್ಲಿರುವದರಿಂದ ಪ್ರತಿವರ್ಷ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಕೈಲುಮುಹೂರ್ತವನ್ನು ಈ ಬಾರಿ ಸಾಂಪ್ರದಾಯಿಕವಾಗಿ ಆಯುಧ ಪೂಜೆಯನ್ನಷ್ಟೇ ಮಾಡುವ ಮೂಲಕ ಸಂತ್ರಸ್ತರ ನೆರವಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸಾರಲಾಯಿತು. ನಂತರ ಮಹಾಮಳೆಯಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿಉತ್ತಪ್ಪ ಕಳೆದ ತಿಂಗಳು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕೈಲುಮುಹೂರ್ತ ಹಬ್ಬ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಒಕ್ಕೂಟದ ಮೂಲಕ ಎಲ್ಲರೂ ಒಗ್ಗೂಡಿ ನಮ್ಮ ಸಂಸ್ಕøತಿಯನ್ನು ಅದ್ಧೂರಿಯಾಗಿ ಪ್ರತಿಬಿಂಬಿಸುವ ಕಾರ್ಯಕ್ರಮವನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಇಂದು ಕೊಡಗಿನ ಜನ ನೋವಿನಲ್ಲಿದ್ದು, ಹಬ್ಬವನ್ನು ಸರಳವಾಗಿ ಆಚರಿಸುವದು ಅನಿವಾರ್ಯವಾಯಿತು ಎಂದು ತಿಳಿಸಿದರು. ಜೀವಹಾನಿ ಮತ್ತು ಆಸ್ತಿ, ಮನೆಗಳನ್ನು ಕಳೆದುಕೊಂಡವರ ಕುಟುಂಬಗಳು ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದ್ದು, ಸರಕಾರ ನೀಡುವ ಪರಿಹಾರ ಸಂತ್ರಸ್ತರಿಗೆ ಶೀಘ್ರ ದೊರೆಯುವಂತಾಗಬೇಕು ಎಂದು ರವಿಉತ್ತಪ್ಪ ಹೇಳಿದರು.
ಒಕ್ಕೂಟದ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮಾತನಾಡಿ ಸಂತ್ರಸ್ತರಿಗೆ ಸಕಾಲದಲ್ಲಿ ಸರಕಾರದ ಸೌಲಭ್ಯಗಳು ತಲುಪಬೇಕು ಎಂದರು. ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋಳೇರ ಸನ್ನು ಉತ್ತಪ್ಪ, ಕಂಬೀರಂಡ ಕಾಳಪ್ಪ, ಬೊಳ್ಳಿಯಂಗಡ ದಾದು ಪೂವಯ್ಯ ಮತ್ತಿತರರು ಹಾಜರಿದ್ದರು. ಮಹಾಮಳೆಗೆ ಸಿಲುಕಿ ಮೃತಪಟ್ಟವರಿಗಾಗಿ ಸಭೆ ಮೌನ ನಮನ ಸಲ್ಲಿಸಿತು.