ಶ್ರೀಮಂಗಲ, ಸೆ. 9: ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕೆಕೆಆರ್ ಟೀ ಎಸ್ಟೇಟ್ ಸಮೀಪ ಇರುವ ಬಿಎಸ್‍ಎನ್‍ಎಲ್ ಮೊಬೈಲ್ ಟವರ್‍ನ ಸೇವೆಯು ವಿದ್ಯುತ್ ಇದ್ದರೆ ಮಾತ್ರ ಚಾಲನೆಯಾಗುತ್ತಿದ್ದು, ವಿದ್ಯುತ್ ಕಡಿತವಾದರೆ ದೂರವಾಣಿ ಸೇವೆ ಲಭ್ಯವಿರುವದಿಲ್ಲ. ಇದರಿಂದ ಈ ವ್ಯಾಪ್ತಿಯ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಕೆಕೆಆರ್ ಟೀ ಎಸ್ಟೇಟ್‍ನಲ್ಲಿರುವ ಬಿಎಸ್‍ಎನ್‍ಎಲ್ ಮೊಬೈಲ್ ಟವರ್‍ಗೆ ವಿದ್ಯುತ್ ಕಡಿತವಾದರೆ, ಸ್ವಯಂಚಾಲಿತವಾಗಿ ಚಾಲನೆಗೊಳ್ಳುವ ಜನರೇಟರ್ ವ್ಯವಸ್ಥೆ ಇಲ್ಲ. ಬದಲಿಗೆ ಮಾನವ ಚಾಲಿತ ಜನರೇಟರ್ ವ್ಯವಸ್ಥೆ ಅಳವಡಿಸಲಾಗಿದೆ. ವಿದ್ಯುತ್ ಕಡಿತವಾಗಿ ಸ್ವಲ್ಪ ಸಮಯದಲ್ಲಿಯೇ ಬ್ಯಾಟರಿ ಬ್ಯಾಕಪ್ ಮುಗಿದಂತೆ ದೂರವಾಣಿ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಈ ಟವರ್‍ನ ಮೂಲಕ ದೂರವಾಣಿ ಸಂಪರ್ಕ ಪಡೆದುಕೊಂಡಿರುವ ಬಿಎಸ್‍ಎನ್‍ಎಲ್ ಮೊಬೈಲ್ ನೆಟ್‍ವರ್ಕ್ ಕಡಿತವಾಗುತ್ತದೆ.

ಮೊಬೈಲ್ ಟವರ್ ಸ್ಥಳದಲ್ಲಿ ಅಳವಡಿಸಿರುವ ಜನರೇಟರನ್ನು ಇಲಾಖೆಯವರು ಆಗಮಿಸಿ ವಿದ್ಯುತ್ ಕಡಿತ ಸಂದರ್ಭ ಚಾಲನೆಗೊಳಿಸಬೇಕಾಗಿದೆ. ಆದರೆ, ಅದನ್ನು ಚಾಲನೆಗೊಳಿಸಲು ಇಲಾಖೆಯವರು ಬಂದಾಗ ಅದು ಚಾಲನೆಗೊಳ್ಳದೆ ಹಲವು ಬಾರಿ ಕೈಕೊಟ್ಟಿದ್ದೂ ಇದೆ. ಇಂತಹ ಸಂದರ್ಭದಲ್ಲಿ ಮತ್ತೆ ವಿದ್ಯುತ್ ಬರುವವರೆಗೆ ನೆಟ್‍ವರ್ಕ್‍ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.

ಈ ಟವರ್‍ನ 20 ಮೀ. ಅಂತರದಲ್ಲಿ ಖಾಸಗಿ ಟವರ್ ಇದ್ದು ಅಲ್ಲಿ ಅಳವಡಿಸಿರುವ ಜನರೇಟರ್ ವಿದ್ಯುತ್ ಕಡಿತವಾಗಿ ಬ್ಯಾಟರಿ ಬ್ಯಾಕಪ್ ಕಡಿಮೆಯಾಗುತ್ತಿದ್ದಂತೆ ಸ್ವಯಂ ಚಾಲನೆಗೊಳ್ಳುತ್ತದೆ. 4 ವರ್ಷದ ಹಿಂದೆ ಇಲ್ಲಿ ಖಾಸಗಿ ಮೊಬೈಲ್ ಟವರ್ ಸ್ಥಾಪನೆಯಾಗಿದ್ದು, ಆರಂಭದಿಂದಲೇ 3ಜಿ ಸೌಲಭ್ಯ ಅಳವಡಿಸಿದ್ದು, ಕಳೆದ 2 ವರ್ಷದಿಂದ 4ಜಿ ಸೌಲಭ್ಯವನ್ನೂ ಒದಗಿಸಿದೆ. ಆದರೆ, ಖಾಸಗಿ ಟವರ್‍ಗಿಂತ 2 ವರ್ಷ ಹಿರಿಯ ಮೊಬೈಲ್ ಟವರ್ ಆಗಿರುವ ಬಿಎಸ್‍ಎನ್‍ಎಲ್ ಕಳೆದ 6 ವರ್ಷದಿಂದಲೂ 2ಜಿ ಸೌಲಭ್ಯವನ್ನೇ ನೀಡುತ್ತಿದ್ದು, ಈ ಸೌಲಭ್ಯವನ್ನು ಸಹ ಸರಿಯಾಗಿ ನೀಡದೆ ಇರುವ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಎಸ್‍ಎನ್‍ಎಲ್ ದೂರವಾಣಿಯನ್ನೆ ಅವಲಂಭಿಸಿರುವ ಗ್ರಾಹಕರು ದೂರವಾಣಿಯ ಸೇವೆಯ ವ್ಯತ್ಯಯದಿಂದ ತೀವ್ರ ತೊಂದರೆಪಡುವಂತಾಗಿದೆ.

ಮೊಬೈಲ್ ಟವರ್‍ಗಳ ನಿರ್ವಹಣೆಯನ್ನು ಬಿಎಸ್‍ಎನ್‍ಎಲ್ ಇಲಾಖೆ ಬೇರೆಯವರಿಗೆ ನೀಡಿದೆ. ಕೆಕೆಆರ್ ಬಿಎಸ್‍ಎನ್‍ಎಲ್ ಟವರ್‍ನಲ್ಲಿ ಸಮಸ್ಯೆಯಾಗುತ್ತಿರುವದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಿಸಲು ಜಿಲ್ಲಾ ಬಿಎಸ್‍ಎನ್‍ಎಲ್ ಇಲಾಖೆ ಟಿಡಿಎಂ ಅವರಿಗೆ ಪತ್ರ ಬರೆಯಲಾಗಿದೆ ಎಂದು ಗೋಣಿಕೊಪ್ಪಲಿನ ಶ್ರೀನಿವಾಸ್ ಎಸ್‍ಡಿಓಟಿ, ಬಿಎಸ್‍ಎನ್‍ಎಲ್ ಇಲಾಖೆಯ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. - ಅಣ್ಣೀರ ಹರೀಶ್ ಮಾದಪ್ಪ