ಮಡಿಕೇರಿ, ಸೆ. 9: ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕಾಂಡನಕೊಲ್ಲಿ, ಕೊಪ್ಪತ್ತೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಅಪಾರ ಕಷ್ಟ - ನಷ್ಟ ಉಂಟಾಗಿದ್ದರೂ, ಇದುವರೆಗೆ ಈ ಗ್ರಾಮಗಳನ್ನು ಪ್ರತಿನಿಧಿಸುವ ಗ್ರಾ.ಪಂ. ಉಪಾಧ್ಯಕ್ಷೆ ಭಾರತಿ ಅವರು ತಿರುಗಿಯೂ ನೋಡಿಲ್ಲವೆಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ ಯೊಂದಿಗೆ ಮಾತನಾಡಿದ ಎ.ಡಿ. ನಾಣಯ್ಯ, ಸುಮಿತ್ರ ಸೋಮಣ್ಣ, ಮುದ್ದುರ ಪೂವಣ್ಣ, ಕಾಮವ್ವ, ಬಿದ್ದಪ್ಪ ಮೊದಲಾದವರು ಗ್ರಾ.ಪಂ. ವಿರುದ್ಧ ತೀವ್ರ ಅಸಮಾಧಾನದೊಂದಿಗೆ ಉಪಾಧ್ಯಕ್ಷರು ಕಾಣೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಆ ಭಾಗದ ಜನಪ್ರತಿನಿಧಿಗಳು ಜನತೆಯ ಅಹವಾಲು ಆಲಿಸಲು ಬಾರದಿರುವ ವಿಷಯ ತಿಳಿದು, ಗ್ರಾ.ಪಂ. ಅಧ್ಯಕ್ಷೆ ಲತಾ ನಾಗರಾಜ್ ಈ ಭಾಗದಲ್ಲಿ ಪ್ರವಾಸ ಕೈಗೊಂಡು ಕುಂದುಕೊರತೆ ಆಲಿಸುತ್ತಿದ್ದರಾದರೂ, ಇನ್ನು ಜನತೆಗೆ ಸೀಮೆಎಣ್ಣೆ ಸಹಿತ ಆಹಾರ ಧಾನ್ಯ ಕಿಟ್ ಲಭಿಸದಿರುವ ಕುರಿತು ನೇರ ಅಸಮಾಧಾನ ತೋಡಿಕೊಳ್ಳುತ್ತಿದ್ದರು.
ಇನ್ನೆರಡು ದಿನಗಳಲ್ಲಿ ಪಂಚಾಯಿತಿಯಿಂದ ಅಗತ್ಯ ಸವಲತ್ತು ದೊರಕಿಸಿಕೊಡುವ ಭರವಸೆಯನ್ನು ನೀಡಿದ ಅಧ್ಯಕ್ಷರು, ಕ್ಷೇತ್ರದ ಪ್ರತಿನಿಧಿಗಳು ಬಾರದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ತಾನು ಕೂಡ ಹಟ್ಟಿಹೊಳೆ - ಕಾಂಡನಕೊಲ್ಲಿ ನಡುವೆ ಸಂಪರ್ಕ ಸಾಧಿಸಲಾರದೆ ಸುಂಟಿಕೊಪ್ಪ ಮಾರ್ಗವಾಗಿ ಬಳಸುದಾರಿಯಲ್ಲಿ ಆಗಮಿಸಿದ್ದಾಗಿ ಲತಾ ನಾಗರಾಜ್ ಅಸಹಾಯಕತೆ ತೋಡಿಕೊಂಡರು.