ಸೋಮವಾರಪೇಟೆ, ಸೆ. 9: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೌಷ್ಟಿಕಾಂಶ ಸಪ್ತಾಹ, ಮಾತೃ ವಂದನ ಮತ್ತು ಪೋಷಣಾ ಅಭಿಯಾನ ಕಾರ್ಯಕ್ರಮ ಇಲ್ಲಿನ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋಮವಾರಪೇಟೆಯ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಮತ್ತು ಕಿಶೋರಿಯರು ಪ್ರತಿನಿತ್ಯ ಉಪಯೋಗಿಸುವ ಆಹಾರದಲ್ಲಿ ಸಮತೋಲನ ಇರಬೇಕು. ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿಗಳನ್ನು ಯಥೇಚ್ಪವಾಗಿ ಉಪಯೋಗಿಸಬೇಕು ಎಂದು ಸಲಹೆಯಿತ್ತರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿವಿಲ್ ನ್ಯಾಯಾಧೀಶ ಭರತ್ ಮಾತನಾಡಿ, ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗು ಕೂಡ ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದೆ. ಉತ್ತಮವಾದ ಆರೋಗ್ಯವನ್ನು ಪಡೆಯಬೇಕಾದರೆ ಪೌಷ್ಟಿಕ ಅಂಶವನ್ನು ಹೊಂದಿರುವ ಆಹಾರವನ್ನು ನೀಡಬೇಕು ಎಂದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಇಲಾಖೆ ಮೇಲ್ವಿಚಾರಕಿ ಶೀಲ ಇದ್ದರು.