ಸೋಮವಾರಪೇಟೆ, ಸೆ. 9: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ ವತಿಯಿಂದ, ವಿಜ್ಞಾನದ ಸವಾಲುಗಳಿಗೆ ವೈಜ್ಞಾನಿಕ ಪರಿಹಾರ ಎಂಬ ಮುಖ್ಯ ವಿಷಯದಡಿ ತಾಲೂಕಿನ ಪ್ರೌಢÀಶಾಲೆ ವಿದ್ಯಾರ್ಥಿಗಳಿಗೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ಸವಾಲುಗಳನ್ನು ಎದುರಿಸುವ ಮೂಲಕ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳನ್ನು ವೈಜ್ಞಾನಿಕ ಸಂಶೋಧನೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದರು.
ವೇದಿಕೆಯಲ್ಲಿ ಬಿ.ಆರ್.ಸಿ ಗಳಾದ ಸಿ.ಆರ್. ಶಶಿಧರ್, ವಿಜಯಕುಮಾರ್, ನೋಡಲ್ ಅಧಿಕಾರಿ ಹೆಚ್.ಆರ್. ಶೇಖರ್, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧÀರ ಮುಖ್ಯ ಶಿಕ್ಷಕಿ ಎಂ.ಜೆ. ಅಣ್ಣಮ್ಮ, ಬಿ.ಆರ್.ಪಿ.ಗಳಾದ ಕಾಜೂರು ಸತೀಶ್, ಅಶೋಕ್, ಜವರಯ್ಯ, ಹ್ಯೂಬರ್ಟ್ ಡಯಾಸ್ ಇದ್ದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವ್ಯವಸಾಯ ಮತ್ತು ಸಾವಯುವ ಕೃಷಿ, ಆರೋಗ್ಯ ಮತ್ತು ನೈರ್ಮಲ್ಯ, ಸಂಪನ್ಮೂಲ ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ಸಾರಿಗೆ ಮತ್ತು ಸಂಪರ್ಕ ಹಾಗೂ ಗಣಿತ ಶಾಸ್ತ್ರದಿಂದ ವಿನ್ಯಾಸಗೊಳಿಸುವಿಕೆ ಎಂಬ ವಿಷಯದಡಿಯಲ್ಲಿ ವಿದ್ಯಾರ್ಥಿಗಳ ವಸ್ತು ಪ್ರದರ್ಶನ ಗಮನ ಸೆಳೆಯಿತು.