ವೀರಾಜಪೇಟೆ, ಸೆ. 9: ಕಳೆದ ಒಂದು ತಿಂಗಳ ಹಿಂದೆ ಕೊಡಗು ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಾವಿರಕ್ಕೂ ಅಧಿಕ ಮಂದಿ ಮನೆ ಮಠ ಆಸ್ತಿ ಪಾಸ್ತಿ ಕಳೆದುಕೊಂಡು ಅನಾಥರಾಗಿರುವದರಿಂದ ಈ ಬಾರಿಯ ಐತಿಹಾಸಿಕ ಗೌರಿ ಗಣೇಶೋತ್ಸವವನ್ನು ಯಾವದೇ ಆಡಂಬರವಿಲ್ಲದೆ ಅತಿ ಸರಳವಾಗಿ ಆಚರಿಸುವಂತೆ ವೀರರಾಜೇಂದ್ರಪೇಟೆಯ ಐತಿಹಾಸಿಕ ಗೌರಿ ನಾಡ ಹಬ್ಬದ ಒಕ್ಕೂಟ ತೀರ್ಮಾನಿಸಿರುವದಾಗಿ ಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ತಿಳಿಸಿದ್ದಾರೆ.
ಪ್ರಕೃತಿ ವಿಕೋಪಕ್ಕಿಂತ ಮೊದಲು ನಡೆದ ಒಕ್ಕೂಟದ ಸಭೆಯಲ್ಲಿ ವೀರಾಜಪೇಟೆ ಪಟ್ಟಣ ವ್ಯಾಪ್ತಿಯ 21 ಉತ್ಸವ ಸಮಿತಿಗಳು ಈ ಬಾರಿಯ ಗೌರಿ ಗಣೇಶೋತ್ಸವವನ್ನು ಅದ್ಧೂರಿಯಿಂದ ಆಚರಿಸುವಂತೆ ತೀರ್ಮಾನಿಸಲಾಗಿತ್ತು. ಆಗಸ್ಟ್ ತಾ. 15ರಂದು ರಾತ್ರಿ ಕೊಡಗಿನ ಅನೇಕ ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ ಅನಾಹುತ ದುರಂತದಿಂದಾಗಿ ಸಂತ್ರಸ್ತರಾಗಿರುವವರಿಗೆ ಸಹಾಯ ಹಸ್ತ ನೀಡುವ ಸಲುವಾಗಿ ಗೌರಿ ಗಣೇಶನ ಆಚರಣೆಯನ್ನು ಅತಿ ಸರಳವಾಗಿ ಆಚರಿಸಲು ತೀರ್ಮಾನಿಸಿದಾಗ ಎಲ್ಲ 21 ಉತ್ಸವ ಸಮಿತಿಗಳು ಇದಕ್ಕೆ ಸಮ್ಮತಿ ನೀಡಿವೆ. ಉತ್ಸವದ ಆಡಂಬರ ಅದ್ಧೂರಿ ದುಬಾರಿ ವೆಚ್ಚದ ಹಣವನ್ನು ಸಂತ್ರಸ್ತರಿಗೆ ಸಹಾಯದ ರೂಪದಲ್ಲಿ ಪರಿಹಾರ ನೀಡುವಂತೆ ಸಮಿತಿಗಳು ತೀರ್ಮಾನಿಸಿವೆ. ಸಾಂಪ್ರದಾಯಿಕ ಬದ್ದವಾಗಿ ಪೂಜಾ ಕೈಂಕರ್ಯಗಳನ್ನು ಹತ್ತು ದಿನಗಳ ತನಕ ಕೈಗೊಳ್ಳಬಹುದು. ವಿದ್ಯುತ್ ಅಲಂಕೃತ ಮಂಟಪ, ಪ್ರಭಾವಳಿಯನ್ನು ಬಳಸದೆ, ಮನರಂಜನೆ ಇಲ್ಲದೆ ವಿಸರ್ಜನೋತ್ಸವದ ದಿನ ಸಾಮೂಹಿಕ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಾಯಿನಾಥ್ ‘ಶಕ್ತಿ’ಗೆ ತಿಳಿಸಿದ್ದಾರೆ.