ಸುಂಟಿಕೊಪ್ಪ, ಸೆ. 9: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಆಶ್ರಯದಲ್ಲಿ ವರ್ಷಂಪ್ರತಿ ಅದ್ಧೂರಿ, ಸಡಗರ-ಸಂಭ್ರಮದಿಂದ ನಾಡ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿರುವ ಆಯುಧ ಪೂಜೆ ಸಮಾರಂಭವನ್ನು ಈ ವರ್ಷ ಪ್ರಕೃತಿ ವಿಕೋಪದ ಹಿನ್ನೆಲೆ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಮನೆ-ಮಠ, ಅಸ್ತಿ ಪಾಸ್ತಿ, ಕಾಫಿ, ಕರಿಮೆಣಸು ಹಾಗೂ ಇನ್ನಿತರ ಬೆಳೆಗಳು ಹಾನಿಗೊಳಗಾಗಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದು, ಕೋಟ್ಯಾಂತರ ರೂಪಾಯಿ ನಷ್ಟದೊಂದಿಗೆ ಜಿಲ್ಲೆಯ ಜನತೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರಕೃತಿ ವಿಕೋಪದಿಂದ ನಲುಗಿದವರಿಗೆ ಎಲ್ಲ ಜನರ ನೆರವು, ಸಹಕಾರ ಅತ್ಯಗತ್ಯವಾಗಿರುವದರಿಂದ ಅವರ ಸಂಕಷ್ಟದಲ್ಲಿ ಭಾಗಿಗಳಾಗ ಬೇಕೆನ್ನುವ ಉದ್ದೇಶದಿಂದ ತಾ. 18 ರಂದು ಆಯುಧ ಪೂಜೆಯನ್ನು ಸರಳವಾಗಿ ಆಚರಿಸಲಾಗುವದು.
ದಿನದ ಅಂಗವಾಗಿ ಮಂಟಪಗಳ ಶೋಭಾಯಾತ್ರೆ, ಯಾವದೇ ಸ್ಪರ್ಧೆಗಳು ಮತ್ತು ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವದಿಲ್ಲ. ಇದರ ಬದಲಾಗಿ ಸ್ಪರ್ಧಾ ರಹಿತವಾಗಿ ಸ್ಥಳೀಯ ಮಕ್ಕಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಕಲಾವಿದರಿಂದ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವದು. ಸಂಗ್ರಹವಾಗುವ ಚಂದಾ ಹಣದಲ್ಲಿ ಆಯುಧಾ ಪೂಜೆಗೆ ಮಿತವಾಗಿ ಬಳಸಿ, ಉಳಿಕೆಯಾಗುವ ಮೊತ್ತವನ್ನು ನೆರೆ ಸಂತ್ರಸ್ತರಿಗೆ ವಿತರಿಸಲಾಗುವದು ಎಂದು ಅವರುಗಳು ತಿಳಿಸಿದ್ದಾರೆ. ಆಯುಧಾ ಪೂಜೆಯಂದು ನೃತ್ಯ ಕಾರ್ಯಕ್ರಮ ನೀಡುವವರು ಮೊ. 9480070544 ಅನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.