ಮಡಿಕೇರಿ, ಸೆ. 10: ಭಾರತ ಬಂದ್ ಕರೆ ಕೊಡಗಿನಲ್ಲಿ ವಿಭಿನ್ನ ರೀತಿಯ ನಿಲುವಿನೊಂದಿಗೆ ಬಂದ್ ರಹಿತವಾಗಿ ಪ್ರತಿಭಟನೆ ಮೂಲಕ ವ್ಯಕ್ತಗೊಂಡಿತು. ದೇಶದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಬಂದ್ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕೊಡಗಿನ ಇತ್ತೀಚಿನ ಪ್ರಾಕೃತಿಕ ವಿಕೋಪದ ಸನ್ನಿವೇಶದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಂದ್ ನಡೆಸದಿರಲು ಜಿಲ್ಲಾ ಕಾಂಗ್ರೆಸ್ ನಿರ್ಧಾರ ಕೈಗೊಂಡಿತ್ತು.ಜೆಡಿಎಸ್ ಪಕ್ಷವು ಕೂಡ ಈ ನಿಲುವಿಗೆ ಸಹಮತ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ರಾಜಧಾನಿ ಮಡಿಕೇರಿ ಸೇರಿದಂತೆ ವಿವಿಧ ಕಡೆ ಕಾಂಗ್ರೆಸ್, ಜೆಡಿಎಸ್, ಬಿ.ಎಸ್.ಪಿ., ಸಿಪಿಐಎಂ ಮತ್ತಿತರ ಪಕ್ಷಗಳು ಇಂಧನ ಬೆಲೆ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಬೆಲೆಯನ್ನು ಇಳಿಸುವಂತೆ ಆಗ್ರಹಿಸಿದವು.ಕಳೆದ ಕೆಲವಾರು ದಿನ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಚರಿಸದೆ ಸ್ಥಗಿತಗೊಂಡಿದ್ದ ಖಾಸಗಿ ಬಸ್‍ಗಳು ಮಾತ್ರ ಇಂದು ಎಲ್ಲಿಯೂ ಸಂಚರಿಸಲಿಲ್ಲ. ಮೊದಲೇ ವಿಕೋಪದ ಸಂಕಷ್ಟದಿಂದ ನಷ್ಟ ಅನುಭವಿಸುತ್ತಿರುವ ಖಾಸಗಿ ಬಸ್‍ಗಳು ಇಂಧನ ಬೆಲೆ ಏರಿಕೆಯಿಂದ ಮತ್ತಷ್ಟು ನಷ್ಟಕ್ಕೆ ಈಡಾಗಿರುವ ಹಿನ್ನೆಲೆಯಲ್ಲಿ ಇಂದಿನ ಪ್ರತಿಭಟನೆಗೆ ಬೆಂಬಲ ನೀಡಿದ್ದವು.

ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ಜಿಲ್ಲೆಯ ಪರಿವ್ಯಾಪ್ತಿಯಲ್ಲಿ ಪ್ರಯಾಣಿಕರನ್ನು ಒಯ್ದರೂ ಜಿಲ್ಲೆಯ ಗಡಿದಾಟಿ ತೆರಳಲು ಸಾಧ್ಯವಾಗಲಿಲ್ಲ. ಬೇರೆ ಜಿಲ್ಲೆಗಳಲ್ಲಿ ರಸ್ತೆ ತಡೆ ಇತ್ಯಾದಿ ಪ್ರತಿಭಟನೆ ನಡೆದಿರುವ ಹಿನ್ನೆಲೆಯಲ್ಲಿ ಕೇವಲ ಜಿಲ್ಲಾಮಟ್ಟದಲ್ಲಿ ಸರ್ಕಾರಿ ಬಸ್‍ಗಳು ಸಂಚರಿಸಿದ್ದುದಾಗಿ ತಿಳಿದುಬಂದಿದೆ.

ಶಾಲಾ - ಕಾಲೇಜುಗಳು ಯಾವದೇ ತಡೆಯಿಲ್ಲದೆ ಎಂದಿನಂತೆ ಕಾರ್ಯನಿರ್ವಹಿಸಿದುದಾಗಿ ತಿಳಿದು ಬಂದಿದೆ. ಖಾಸಗಿ ವಾಹನಗಳ ಓಡಾಟಕ್ಕೆ ತಡೆಯುಂಟು ಮಾಡಿದ ಪ್ರಕರಣ ವರದಿಯಾಗಿಲ್ಲ. ಅಂಗಡಿ, ವ್ಯಾಪಾರ ಮಳಿಗೆಗಳು ಎಂದಿನಂತೆ ತೆರೆದಿದ್ದವು.

ಕಾಂಗ್ರೆಸ್- ಜೆಡಿಎಸ್ ಪ್ರತಿಭಟನೆ

ಡೀಸೆಲ್- ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಇಂದು ಮಡಿಕೇರಿ ನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಎರಡೂ ಪಕ್ಷಗಳ ನಾಯಕರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ತೈಲ ಬೆಲೆ ಇಳಿಕೆಗೆ ಆಗ್ರಹಿಸಿದರು.

ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ದರ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿ.ಟಿ. ವೃತ್ತದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿ ಸಾಕಷ್ಟು ಹಾನಿಯಾಗಿರುವ ಕಾರಣ ಬಂದ್ ಮಾಡದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿಗೆ ಪ್ರಧಾನಿ ಮೋದಿ ಭೇಟಿ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕಾಫಿ ಬೋರ್ಡ್ ಕೇಂದ್ರ ಸರಕಾರದ ಅಧೀನದಲ್ಲಿದ್ದು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ ಕಾಫಿ ಬೆಳೆಗಾರರಿಗೆ ಕೇಂದ್ರ ಸರಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ದರವನ್ನು ನಿಯಂತ್ರಿಸುವಲ್ಲಿ ವಿಫಲವಾದ ಕೇಂದ್ರ ಸರಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಾಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ, ಪ್ರಮುಖರಾದ ತೆನ್ನಿರಾ ಮೈನಾ, ಚುಮ್ಮಿ ದೇವಯ್ಯ, ಟಿ.ಪಿ. ರಮೇಶ್, ಪ್ರಭು ರೈ ಉಪಸ್ಥಿತರಿದ್ದರು.

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ನಗರದ ಜಿ.ಟಿ. ವೃತ್ತದ ಬಳಿ ಜೆಡಿಎಸ್ ಮತ್ತು ಬಹುಜನ ಸಮಾಜ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಯಿತು. ಮೋದಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು

(ಮೊದಲ ಪುಟದಿಂದ) ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕೇಂದ್ರ ಸರಕಾರ ಜನ ಸಾಮಾನ್ಯರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಕಳೆದ 4 ವರ್ಷದಿಂದ ಜನವಿರೋಧಿ ಆಡಳಿತವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಭಾರತ ಬಂದ್‍ಗೆ ಜೆಡಿಎಸ್ ಬೆಂಬಲವಿದೆ. ಆದರೆ, ಕೊಡಗಿನಲ್ಲಿ ಆಗಿರುವ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಜನರಿಗೆ ತೊಂದರೆಯಾಗದಂತೆ ಬಂದ್ ಮಾಡದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರು ನೀಡಿರುವ ಅಭಿವೃದ್ಧಿ ಆಶ್ವಾಸನೆಗಳು ಇಂದಿಗೂ ಈಡೇರಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬೋಜಪ್ಪ, ಜಿಲ್ಲಾ ವಕ್ತಾರ ಆದಿಲ್ ಪಾಷಾ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ನಗರಸಭಾ ಸದಸ್ಯೆ ಲೀಲಾ ಶೇಷಮ್ಮ, ಮಾಜಿ ಸದಸ್ಯ ಅಶ್ರಫ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಶ್ವ ಸೇರಿದಂತೆ ಜೆಡಿಎಸ್ ಹಾಗೂ ಬಿಎಸ್‍ಪಿ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.

ವೀರಾಜಪೇಟೆ

ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್ ಹಿನೆÀ್ನಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ ಮಿತ್ರ ಪಕ್ಷಗಳು ಪ್ರತಿಭಟನೆ ನಡೆಸಿದವು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಗೋಣಿಕೊಪ್ಪ ರಸ್ತೆಯ ಸೆರೆನಿಟಿ ಹಾಲ್‍ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಘೋಷಣೆಗಳನ್ನು ಕೂಗಿದರು. ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು. ತಹಶೀಲ್ದಾರ್ ಪರವಾಗಿ ಶಿರಸ್ತೇದಾರ್ ಕೆ.ಎಂ. ಚಿಣ್ಣಪ್ಪ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮೂಲಕ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಕೇಂದ್ರ ಸರ್ಕಾರವು ದಿನನಿತ್ಯ ಬಳಕೆಗೆ ಬೇಕಾದ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಇನ್ನಿತರ ಅನಿಲ ಉತ್ಪನ್ನಗಳ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವದರಿಂದ ಜನಸಾಮಾನ್ಯರು, ಮದ್ಯಮ ವರ್ಗದವರು, ಕಡು ಬಡವರು, ಆಟೋ ಚಾಲಕರು, ಬಸ್ ಮಾಲೀಕರು ತತ್ತರಿಸಿ ಹೋಗಿದ್ದಾರೆ ಎಂದು ಹೇಳಿದರು.

ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಅಬ್ದುಲ್ ಸಲಾಂ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 60 ದಿನಗಳಲ್ಲಿ ಬದಲಾವಣೆಯ ವಾಗ್ದಾನವನ್ನು ನೀಡಿದ್ದರು. ಆದರೆ ನುಡಿದಂತೆ ನಡೆಯದೆ ದೇಶದ ಜನರನ್ನು ಕತ್ತಲೆಯಲ್ಲಿ ಇಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ ಮೋಹನ್, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಡಿ.ಸಿ ಧ್ರುವ, ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಆರ್ .ಎಂ.ಸಿ ಸದಸ್ಯ ಮಾಳೇಟ್ಟಿರ ಬೋಪಣ್ಣ, ಕಡೇಮಾಡ ಕುಸಮಾ, ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಯೂತ್ ಕಾಂಗ್ರೆಸ್ ಕಾರ್ಯದರ್ಶಿ ರೆಜಿತ್ ಕುಮಾರ್, ನಗರ ಕಾರ್ಯದರ್ಶಿ ಶಶಿಧರನ್, ಮಾಳೇಟಿರ ಬೆಲ್ಲು ಬೋಪಯ್ಯ, ಸೇವಾ ದಳದ ಎಂ.ಎಲ್.ಸೈನುದ್ದೀನ್, ಚಿಲ್ಲವಂಡ ಕಾವೇರಪ್ಪ, ಮಹಮ್ಮದ್ ರಾಫಿ, ಜನತಾ ದಳದ ನಾಸೀರ್, ಗೋಪಾಲ್, ಪೊನ್ನಂಪೇಟೆ ಬ್ಲಾಕ್‍ನ ವಕ್ತಾರ ನಾರಾಯಣ ಸ್ವಾಮಿ, ಮತ್ತಿತರರ ಕಾರ್ಯಕರ್ತರು ಹಾಜರಿದ್ದರು.

ಸಿಪಿಐಎಂ ಪ್ರತಿಭಟನೆ

ಕೇಂದ್ರ ಸರ್ಕಾರದ ತ್ಯೆಲಬೆಲೆಯ ಏರಿಕೆಯನ್ನು ಖಂಡಿಸಿ ಸಿಪಿಐ ಹಾಗೂ ಸಿಪಿಐ (ಎಂ) ಪಕ್ಷದ ವತಿಯಿಂದ ಕಾರ್ಯಕರ್ತರು ಇಲ್ಲಿನ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿದರು. ಸಿಪಿಐ (ಎಂ)ನ ಸಾಬು, ಸಿಪಿಐನ ಸುನೀಲ್, ರಜನಿಕಾಂತ್, ಶಿವಪ್ಪ, ಮಣಿ ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

ಸೋಮವಾರಪೇಟೆ

ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿ ಜಾತ್ಯತೀತ ಜನತಾದಳದ ವತಿಯಿಂದ ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಇಲ್ಲಿನ ಪಕ್ಷದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು, ಖಾಸಗಿ ಬಸ್‍ನಿಲ್ದಾಣ, ತ್ಯಾಗರಾಜ ರಸ್ತೆ, ಮುಖ್ಯರಸ್ತೆ ಮೂಲಕ ಪುಟ್ಟಪ್ಪ ವೃತ್ತಕ್ಕೆ ತೆರಳಿ, ಮಾನವ ಸರಪಳಿ ರಚಿಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ಕೆ.ಟಿ. ಪರಮೇಶ್, ಬಗ್ಗನ ಹರೀಶ್, ಗಿರೀಶ್, ಶಿವಪ್ಪ, ತ್ರಿಶೂಲ್, ವಕ್ತಾರ ಕೃಷ್ಣಪ್ಪ, ಯುವ ಜೆಡಿಎಸ್ ಅಧ್ಯಕ್ಷ ಪ್ರವೀಣ್, ವಿಜಯಕುಮಾರ್, ಕಮಲ್ ಸೇರಿದಂತೆ ಇತರರು ಭಾಗವಹಿಸಿದ್ದರು.

* ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರ ದಿನನಿತ್ಯದ ಸಂಚಾರ ವ್ಯವಸ್ಥೆ ದುಬಾರಿಯಾಗುತ್ತಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕದ ಅಸಮರ್ಥ ಪ್ರಧಾನಿ ದೇಶವನ್ನು ಮುನ್ನಡೆಸುತ್ತಿರುವದು ದುರಂತ ಎಂದು ಆರೋಪಿಸಿರುವ ಕಾಂಗ್ರೆಸ್, ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದೆ.

ಈ ಬಗ್ಗೆ ತಾಲೂಕು ತಹಶೀಲ್ದಾರ್ ಮಹೇಶ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಏರಿಕೆಯಾಗುತ್ತಿದೆ. ಪರಿಣಾಮವಾಗಿ ದಿನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ರೂಪಾಯಿ ಮೌಲ್ಯವೂ ಪಾತಾಳಕ್ಕೆ ಇಳಿಯುತ್ತಿದೆ. ಆದರೂ ಪ್ರಧಾನಿಗಳು ಮೌನಕ್ಕೆ ಶರಣಾಗಿರುವದು ದುರದೃಷ್ಟ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಆರೋಪಿಸಿದರು.

ಜಿಎಸ್‍ಟಿ ಹಾಗೂ ಇತರ ಮೂಲಗಳಿಂದ ಸಾಕಷ್ಟು ಹಣ ಸಂಗ್ರಹ ಆಗುತ್ತಿದ್ದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದಾಗಿ

ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಚಿಲ್ಲರೆ ಮತ್ತು ಸಗಟು ಹಣದುಬ್ಬರ ಏರಿಕೆಯಾಗುತ್ತಿದೆ. ಪರಿಣಾಮವಾಗಿ ದಿನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ರೂಪಾಯಿ ಮೌಲ್ಯವೂ ಪಾತಾಳಕ್ಕೆ ಇಳಿಯುತ್ತಿದೆ. ಆದರೂ ಪ್ರಧಾನಿಗಳು ಮೌನಕ್ಕೆ ಶರಣಾಗಿರುವದು ದುರದೃಷ್ಟ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಆರೋಪಿಸಿದರು.

ಜಿಎಸ್‍ಟಿ ಹಾಗೂ ಇತರ ಮೂಲಗಳಿಂದ ಸಾಕಷ್ಟು ಹಣ ಸಂಗ್ರಹ ಆಗುತ್ತಿದ್ದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದರಿಂದಾಗಿ ಬಡವರು, ಕಾರ್ಮಿಕರು, ಹಿಂದುಳಿ ದವರ ಜೀವನ ದುಸ್ತರವಾಗುತ್ತಿದೆ. ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕದಿದ್ದಲ್ಲಿ ಕಾಂಗ್ರೆಸ್‍ನಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಈ ಸಂದರ್ಭ ತಾ.ಪಂ. ಸದಸ್ಯ ಸತೀಶ್, ಕಾಂಗ್ರೆಸ್ ಮುಖಂಡರಾದ ಹೆಚ್.ಸಿ. ನಾಗೇಶ್, ಕೆ.ಕೆ. ಮಂಜುನಾಥ್, ನಂದಕುಮಾರ್, ಚೇತನ್, ಬಿ.ಈ. ಜಯೇಂದ್ರ, ಶೀಲಾ ಡಿಸೋಜ, ಟಿ.ಈ. ಸುರೇಶ್, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.