ಸೋಮವಾರಪೇಟೆ, ಸೆ. 10: ಮಳೆಗಾಲದಲ್ಲೂ ಸಂಭ್ರಮ ಸಡಗರಕ್ಕೆ ಹೆಸರಾಗಿದ್ದ ಗೌರಿ ಗಣೇಶೋತ್ಸವ ಈ ವರ್ಷ ಕಳೆಗುಂದಿದಂತೆ ಕಾಣಬರುತ್ತಿದೆ. ಪ್ರಸಕ್ತ ವರ್ಷ ಸಂಭವಿಸಿದ ಪ್ರಕೃತಿ ವಿಕೋಪ ಉತ್ಸವದ ಸಂಭ್ರಮ ಕಸಿದಿದೆ.

ಇನ್ನೆರಡು ದಿನಗಳಲ್ಲಿ ಆಚರಣೆಗೆ ಬರುವ ಗೌರಿ ಹಬ್ಬಕ್ಕೆ ಪೂರಕವಾದ ಸಂಭ್ರಮದ ವಾತಾವರಣ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲೂ ಕಂಡುಬರುತ್ತಿಲ್ಲ. ಪ್ರಕೃತಿಯ ಮುನಿಸಿಗೆ ತುತ್ತಾಗಿ ಸಂಭ್ರಮದ ಉತ್ಸಾಹವನ್ನೇ ಕಳೆದುಕೊಂಡಿರುವ ಸಾರ್ವಜನಿಕರು, ಸಾಮೂಹಿಕ ಹಬ್ಬದಾಚರಣೆಗೆ ಹಿಂದೇಟು ಹಾಕುವಂತಾಗಿದೆ.

ಆದರೂ ಸಾಂಪ್ರದಾಯಿಕವಾಗಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪರಂಪರೆಯನ್ನು ಮುಂದುವರೆಸಲು ಕೆಲವು ಕಡೆ ತೀರ್ಮಾನಿಸಲಾಗಿದೆ. ಹಲವು ಭಾಗಗಳಲ್ಲಿ ಆಡಂಬರಕ್ಕೆ ತಿಲಾಂಜಲಿಯಿಟ್ಟು, ಸರಳತೆಗೆ ಪ್ರಾಧಾನ್ಯತೆ ನೀಡಲಾಗಿದೆ.

ಆ. 16ರ ನಂತರ ನಿರಂತರ ಅವಘಡಗಳಿಗೆ ಎಡೆಯಾದ ಸನ್ನಿವೇಶಗಳನ್ನು ಸ್ಮರಿಸುತ್ತಿರುವ ಮಂದಿ, ಪ್ರಾಕೃತಿಕ ವಿಕೋಪದ ಭಯಾನಕ ಸನ್ನಿವೇಶಗಳಿಂದ ಇಂದಿಗೂ ಹೊರಬಂದಿಲ್ಲ. ಹಬ್ಬದ ಮಾತುಕತೆಗಿಂತಲೂ ಪ್ರವಾಹದ ಬಗೆಗಿನ ಮಾತುಗಳೇ ಜನವಲಯದಲ್ಲಿ ಹರಿದಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಹಬ್ಬ ಬೇಕೇ? ಎನ್ನುವಷ್ಟರ ಮಟ್ಟಿಗೆ ಮನಸ್ಸು ಗಟ್ಟಿಮಾಡಿಕೊಂಡಿದ್ದಾರೆ.

ಕಳೆದ ವರ್ಷದವರೆಗೂ ಗೌರಿ ಗಣೇಶ ಹಬ್ಬಕ್ಕೆ ಒಂದೆರಡು ವಾರಗಳಿರುವಾಗಲೇ ಜನತೆ ಸಂಭ್ರಮದಿಂದ ಸಿದ್ಧತಾ ಕಾರ್ಯ ಮಾಡುತ್ತಿದ್ದರು. ಮನೆಗಳಿಗೆ ಸುಣ್ಣ ಬಣ್ಣ ಬಳಿದು ಹಬ್ಬವನ್ನು ಸ್ವಾಗತಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಗೆ ತಾಲೂಕಿನ ಜನರು ಸಾಕಷ್ಟು ಅನಾಹುತಗಳನ್ನು ಕಂಡಿದ್ದು, ಕೆಲವರು ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಕೃಷಿ ಉತ್ಪನ್ನಗಳು ಹಾಗೂ ಮನೆ ಮಠಗಳನ್ನು ಕಳೆದುಕೊಂಡಿರುವ ನೂರಾರು ಮಂದಿ ಇಂದಿಗೂ ಭವಿಷ್ಯದ ಬಗ್ಗೆ ಪರಿತಪಿಸುವಂತಾಗಿದೆ. ಕಳೆದ ವರ್ಷದ ವರೆಗೂ ಗ್ರಾಮಕ್ಕೊಂದು, ಪಟ್ಟಣದ ರಸ್ತೆಗೊಂದರಂತೆ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಿ ಸಂಭ್ರಮಿಸುತ್ತಿದ್ದ ಜನರು ಈ ಬಾರಿ ಹಬ್ಬದಾಚರಣೆಗೆ ಅಷ್ಟಾಗಿ ಮುಂದಾಗುತ್ತಿಲ್ಲ.

ದೂರದ ಕೊಣನೂರು, ಮೈಸೂರು, ಚನ್ನರಾಯಪಟ್ಟಣ, ಹಾಸನಗಳಿಗೆ ತೆರಳಿ ತಮ್ಮಿಷ್ಟದ ಗಣಪತಿ ಮೂರ್ತಿಗಳಿಗೆ ಆರ್ಡರ್ ಕೊಟ್ಟು, ಮುಂಗಡ ಹಣ ಪಾವತಿಸಿ ಬರುತ್ತಿದ್ದ ಹಲವಷ್ಟು ಸಮಿತಿಗಳ ಪದಾಧಿಕಾರಿಗಳು ಇಂದು ಅಂತಹ ಉತ್ಸಾಹದಿಂದ ತೊಡಗಿಸಿಕೊಂಡಂತೆ ಕಂಡುಬರುತ್ತಿಲ್ಲ.

ಪಟ್ಟಣದ ಕೆಲವೊಂದು ಅಂಗಡಿಗಳಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿದ್ದರೂ, ಹೇಳಿಕೊಳ್ಳುವಂತಹ ವ್ಯಾಪಾರವಾಗು ತ್ತಿಲ್ಲ. ಕಳೆದ ವರ್ಷ ಈ ಸಮಯಕ್ಕೆ 50ಕ್ಕೂ ಅಧಿಕ ಗಣಪತಿಗಳನ್ನು ಮಾರಾಟ ಮಾಡಿದ್ದೆವು. ಈ ಬಾರಿ 5 ಕ್ಕೆ ಮಾತ್ರ ಮುಂಗಡ ಹಣ ನೀಡಿದ್ದಾರೆ ಎಂದು ವರ್ತಕರೋರ್ವರು ತಿಳಿಸಿದ್ದಾರೆ.

ಹಿಂದಿನ ವರ್ಷ ಅತ್ಯುತ್ಸಾಹದಿಂದ ಮೂರ್ತಿಗಳ ಖರೀದಿ ಮಾಡುತ್ತಿದ್ದರು. ಗ್ರಾಮೀಣ ಜನರು ಹೆಚ್ಚು ಉತ್ಸಾಹದಿಂದ ಹಬ್ಬದಾಚರಣೆಗೆ ಮುಂದಾಗುತ್ತಿದ್ದರು. ಬಗೆಬಗೆಯ ಗಣಪತಿಗಳನ್ನು ಖರೀದಿ ಮಾಡಿದ್ದರು. ಆದರೆ, ಈ ವರ್ಷ ಅಂಗಡಿಯತ್ತ ಜನರು ಮುಖ ಮಾಡುತ್ತಿಲ್ಲ. ನಾವು ತಂದಿರುವ ಮೂರ್ತಿಗಳು ಹಾಗೆಯೇ ಉಳಿದಿದ್ದು, ನಷ್ಟ ಎದುರಿಸಬೇಕಾಗಬಹುದು ಎಂದು ಅಂಗಡಿ ವ್ಯಾಪಾರಿ ಹೆತ್ತೂರು ಗ್ರಾಮದ ಮಂಜು ಅಭಿಪ್ರಾಯಿಸಿದ್ದಾರೆ.

ಅದ್ಧೂರಿ ಪೆಂಡಾಲ್‍ಗಳನ್ನು ಅಳವಡಿಸಿ, 11 ರಿಂದ 18, ಒಂದು ತಿಂಗಳ ಕಾಲದವರೆಗೂ ಉತ್ಸವ ಮೂರ್ತಿಗಳನ್ನು ಪೂಜಿಸಿ, ಆಕರ್ಷಕ ರಥಗಳ ಮೂಲಕ ಸಿಡಿಮದ್ದು, ಬ್ಯಾಂಡ್‍ಸೆಟ್‍ನೊಂದಿಗೆ ಮೆರವಣಿಗೆ ತೆರಳಿ ವಿಸರ್ಜನೆ ಮಾಡುವ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಗೌರಿ ಗಣೇಶ ಉತ್ಸವ ಈ ಬಾರಿ ಕಳೆಗುಂದಿದಂತೆ ಕಂಡುಬರುತ್ತಿದೆ. ಕೆಲವು ಕಡೆಗಳಲ್ಲಿ ಬೆಳಗ್ಗೆ ಪ್ರತಿಷ್ಠಾಪಿಸಿ ಸಂಜೆಯೇ ಮೂರ್ತಿಗಳನ್ನು ವಿಸರ್ಜಿಸುವ ಬಗ್ಗೆಯೂ ಚಿಂತನೆ ಹರಿಸಲಾಗಿದೆ. ಇದರೊಂದಿಗೆ ಪೊಲೀಸ್ ಇಲಾಖೆ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲು 15ಕ್ಕೂ ಅಧಿಕ ನಿಬಂಧನೆಗಳನ್ನು ಹೇರಿದ್ದು, ಎಲ್ಲಾ ನಿಬಂಧನೆಗಳನ್ನು ಚಾಚೂ ತಪ್ಪದಂತೆ ಪಾಲಿಸಬೇಕಿದೆ.