ಮಡಿಕೇರಿ, ಸೆ. 10: ನಗರದ ಖಾಸಗಿ ಬಸ್ ನಿಲ್ದಾಣವು ಮಳೆಯಿಂದ ಶಿಥಿಲಗೊಂಡು, ಇಲ್ಲಿನ ಬಸ್‍ಗಳು ಸಹಜವಾಗಿ ನೂತನ ಬಸ್ ನಿಲ್ದಾಣದತ್ತ ಬದಲಾವಣೆ ಕಂಡುಕೊಂಡಿದ್ದರೂ, ಪ್ರಯಾಣಿಕರಲ್ಲಿ ಗೊಂದಲ ಉಂಟಾಗಿದೆ. ನಿತ್ಯ ಪ್ರಯಾಣಿಸುವವರು ಸೂಕ್ತ ವ್ಯವಸ್ಥೆಯಿಲ್ಲದೆ ಪಟ್ಟಣದ ವಿವಿಧೆಡೆಗಳಿಂದ ಜನರಲ್ ತಿಮ್ಮಯ್ಯ ವೃತ್ತ ತನಕ ತೆರಳಿ, ಬೇರೆ ಬೇರೆ ಮಾರ್ಗಗಳ ಬಸ್‍ಗಳಲ್ಲಿ ಪ್ರಯಾಣಿಸುವಂತಾಗಿದೆ.
ಹಳೆಯ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಟ್ಟಡ ಶಿಥಿಲಗೊಂಡಿದ್ದು, ಅಕ್ಕಪಕ್ಕದ ಮಳಿಗೆಗಳು ನೆಲಕಚ್ಚಿರುವ ಪರಿಣಾಮ ಪತ್ರಿಕಾಭವನ ಬಳಿ ನೂತನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳನ್ನು ನಿಲುಗಡೆಗೊಳಿಸಿ, ಅಲ್ಲಲ್ಲಿ ಸಿಗುವ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ.
ನಗರಸಭೆ ಕರ್ತವ್ಯ: ಮಡಿಕೇರಿ ನಗರಸಭೆಯು ಖಾಸಗಿ ಬಸ್ ಮಾಲೀಕರು ಹಾಗೂ ಕಾರ್ಮಿಕರ ಸಹಿತ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಸಭೆ ನಡೆಸಿ ಸೂಕ್ತ ಮಾರ್ಗಸೂಚಿ ಕಲ್ಪಿಸುವ ಅಗತ್ಯವಿದ್ದು, ಸೂಕ್ತ ಮಾರ್ಗಸೂಚಿ ಕಲ್ಪಿಸುವ ಅಗತ್ಯವಿದ್ದು, ಅದು ಸಂಬಂಧಿಸಿದವರ ಕರ್ತವ್ಯವಾಗಿದೆ.
ಪ್ರಸಕ್ತ ಮಳೆಯು ದೂರವಾಗಿ, ಬಿಸಿಲು ಕಾಣಿಸಿಕೊಂಡಿದ್ದರೂ, ನಿರ್ದಿಷ್ಟ ಬಸ್ ಸಂಚಾರ ಮಾರ್ಗ ರೂಪಿಸದಿರುವ ಪರಿಣಾಮ ಪ್ರಯಾಣಿಕರ ಬವಣೆ ಕೇಳುವವರಿಲ್ಲ. ಶುಕ್ರವಾರದ ಸಂತೆಗೆ ಬಂದಿದ್ದ ಹಳ್ಳಿಗಾಡಿನ ಮಂದಿ ಬಸ್‍ಗಾಗಿ ಖಾಸಗಿ ಹಳೆಯ ನಿಲ್ದಾಣದಲ್ಲಿ ಪರದಾಡುತ್ತಿದ್ದ ಸನ್ನಿವೇಶ ಗೋಚರಿಸಿತು. ಇನ್ನೊಂದೆಡೆ ನೂತನ ನಿಲ್ದಾಣದ ಪರಿಚಯ ಇಲ್ಲದವರು, ಇತರರ ಸಲಹೆ ಪಡೆದು, ಅಲ್ಲಿಂದ ಜನರಲ್ ತಿಮ್ಮಯ್ಯ ವೃತ್ತದೆಡೆಗೆ ತೆರಳಿ ಬಸ್ ಏರಿದರೆ, ಅನಿವಾರ್ಯವಾಗಿ ಕೆಲವರು ಆಟೋಗಳಲ್ಲಿ ಪ್ರಯಾಣಿಸಿ ಮೇಕೇರಿಯಿಂದ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದರು.
ಇನ್ನು ಕೆಲವರು ರಾಜ್ಯ ಸಾರಿಗೆ ಸಂಸ್ಥೆಯ ಮಿನಿ ಬಸ್‍ಗಳನ್ನು ಅವಲಂಬಿಸಿದ್ದು ಕಂಡು ಬಂತು. ಒಟ್ಟಿನಲ್ಲಿ ಹಳೆಯ ಮತ್ತು ಹೊಸ ನಿಲ್ದಾಣಗಳ ನಡುವೆ ಪ್ರಯಾಣಿಕರಿಗೆ ನಿರ್ದಿಷ್ಟ ಮಾರ್ಗಸೂಚಿ ಇಲ್ಲದಿರುವದು ಬವಣೆಗೆ ಕಾರಣವಾದರೆ, ಖಾಸಗಿ ಬಸ್‍ಗಳ ಚಾಲಕರು ಹಾಗೂ ಕಾರ್ಮಿಕ ವರ್ಗ ಕೂಡ ಸಮರ್ಪಕ ವ್ಯವಸ್ಥೆಯಿಲ್ಲದೆ ಪರಿತಪಿಸುವಂತಾಗಿದೆ. ಇತ್ತ ತುರ್ತು ಗಮನ ಅವಶ್ಯಕ.