ಕೂಡಿಗೆ, ಸೆ. 10 : ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಶುಂಠಿ ಬೆಳೆಯ ಬೇಸಾಯ ಮಾಡಿ ನಾಲ್ಕು ತಿಂಗಳು ಕಳೆದಿದ್ದು, ಈ ಭಾಗದ ನೂರಾರು ರೈತರು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಬೆಳೆಯನ್ನು ಬೆಳೆದಿದ್ದಾರೆ. P ಆದರೆ ಈ ಸಾಲಿನಲ್ಲಿ ಅತಿಯಾದ ಮಳೆ, ಕಡ್ಡಿರೋಗ, ಮಹಾಕಾಳಿ ರೋಗಗಳಿಂದಾಗಿ ಶುಂಠಿ ಬೆಳೆಯ ಇಳುವರಿಯಲ್ಲಿ ಕುಂಠಿತಗೊಂಡಿದೆ. ಇದೀಗ ಈ ರೋಗಗಳ ಬಾಧೆಯಿಂದ ರೈತರು ಇದ್ದ ಶುಂಠಿಯನ್ನು ಕಿತ್ತು ಮಾರಾಟ ಮಾಡಿ, ಕೈಗೆ ಸಿಕ್ಕ ಹಣವನ್ನು ಪಡೆಯುತ್ತಿದ್ದಾರೆ. ಇದೇ ವೇಳೆ 60 ಕೆ.ಜಿಯ ಒಂದು ಚೀಲ ಶುಂಠಿಗೆ 1800 ರಿಂದ 2000 ರೂ ಬೆಲೆ ಹೆಚ್ಚಳವಿದೆ. ಆದರೆ, ಶುಂಠಿ ಬೆಳೆ ಇದ್ದರೂ ಒಳಭಾಗದಲ್ಲಿ ರೋಗ ಮತ್ತು ಹುಳುಗಳು ಇರುವದರಿಂದ ಶುಂಠಿ ಖರೀದಿದಾರರು ಹೊಲದಲ್ಲೇ ಬಿಸಾಡುತ್ತಿದ್ದಾರೆ. ಶುಂಠಿ ಬೆಳೆಗೆ ಉತ್ತಮ ಬೆಲೆ ಇದ್ದರೂ ಬೆಳೆಯಲ್ಲಿ ಕುಂಠಿತಗೊಂಡಿದ್ದು, ರೈತರಿಗೆ ದಿಕ್ಕುತೋಚದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.