ವೀರಾಜಪೇಟೆ, ಸೆ. 10 : ವಿದ್ಯಾರ್ಥಿಗಳ ನಿರೀಕ್ಷೆಯ ಗುರಿಯನ್ನು ಈಡೇರಿಸುವುದು ಶಿಕ್ಷಕರ ಕರ್ತವ್ಯ, ವಿದ್ಯಾರ್ಥಿಗಳು ಶ್ರದ್ದೆಯಿಂದ ಕಲಿತು ಜೀವನದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದು ವಿರಾಜಪೇಟೆ ಸರ್ವೋದಯ ವಿದ್ಯಾಲಯದ ಸಹ ಪ್ರಾಧ್ಯಾಪಕಿ ಎಂ. ವಾಣಿ ಹೇಳಿದರು.

ವಿರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಾನವನು ತನ್ನ ಬದುಕಿನಲ್ಲಿ ಸಮಾಜ ಸೇವೆ ಯಂತಹ ಉತ್ತಮ ಕೆಲಸವನ್ನು ಮಾಡಬೇಕು. ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದುದ್ದು ಶಿಕ್ಷಣ, ವಿದ್ಯಾರ್ಥಿಗಳು ಶಿಸ್ತು ಮತ್ತು ಛಲದಿಂದ ವಿದ್ಯೆ ಕಲಿತು ಗುರಿ ಸಾಧಿಸುವಂತಾಗಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ಗಳಲ್ಲಿಯು ಭಾಗವಹಿಸುವುದರೊಂದಿಗೆ ವಿದ್ಯಾವಂತನಾಗಬೇಕು ಎಂದರು. ಕಾಲೇಜಿನ ಪ್ರಾಂಶುಪಾಲೆ ಎನ್. ಕೆ. ಜ್ಯೋತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಅಂತೋಣಿ ಅಳ್ವಾರೀಸ್ ವಿದಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾಭಿವೃದ್ಧಿ ಸಮಿತಿಯ ಆಶಾ ಸುಬ್ಬಯ್ಯ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಎಂ. ದಿನೇಶ್ ಮಾತನಾಡಿದರು. ಉಪನ್ಯಾಸಕ ಚಾಲ್ರ್ಸ್ ಡಿಸೋಜ ಸ್ವಾಗತಿಸಿದರು. ಸಿ.ಯು.ರೋಸಿ ವರದಿ ಮಂಡಿಸಿದರು, ಸಿ.ಜಿ.ಬೀನಾ ನಿರೂಪಿಸಿದರು. ಕನ್ನಡ ಉಪನ್ಯಾಸಕಿ ಕೆ. ಬಿ. ಗೌರಿ ವಂದಿಸಿದರು.