ಮಡಿಕೇರಿ, ಸೆ. 10: ಪ್ರಸಕ್ತ ಸಾಲಿನಲ್ಲಿ ಮಡಿಕೇರಿಯ ಐತಿಹಾಸಿಕ ದಸರಾ ನಾಡಹಬ್ಬವನ್ನು, ಕರ್ನಾಟಕ ಸರಕಾರವು ನೀಡಲಿರುವ ಅನುದಾನ ಅವಲಂಬಿಸಿ, ಆ ಮೊತ್ತಕ್ಕೆ ಪೂರಕ ಕಾರ್ಯಕ್ರಮಗಳನ್ನು ನಡೆಸುವಂತೆ, ಇಂದಿನ ದಸರಾ ಸಮಿತಿಯ ಪ್ರಥಮ ಸಭೆಯಲ್ಲಿ ನಿರ್ಧಾರದೊಂದಿಗೆ, ಈ ದಿಸೆಯಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ ತೆರಳುವಂತೆ ತೀರ್ಮಾನಿ ಸಲಾಯಿತು. ಸಂಪ್ರದಾಯದಲ್ಲಿ ನಗರದ ಪೇಟೆ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾವೇರಿ ಕಲಾಕ್ಷೇತ್ರದಲ್ಲಿ ಸಭೆ ನಡೆಸಲಾಯಿತು.ನಗರಸಭೆಯ ಅಧ್ಯಕ್ಷರಾಗಿರುವ ದಸರಾ ಸಮಿತಿ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ; ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ಸಾವು-ನೋವು ಸಂಭವಿಸುವದರೊಂದಿಗೆ; ಮನೆ, ಮಠಗಳನ್ನು ಕಳೆದುಕೊಂಡಿರುವ ಜನತೆಯ ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಪ್ರದಾಯದಂತೆ ಈ ಬಾರಿ ದಸರಾ ಹಬ್ಬವನ್ನು ದೇವತಾ ಕಾರ್ಯಗಳಿಗೆ ಚ್ಯುತಿ ಬಾರದಂತೆ ಆಚರಿಸಲು ಸಲಹೆ ಕೇಳಿಬಂದಿತು.
ಪ್ರಾಸ್ತಾವಿಕ ನುಡಿಯೊಂದಿಗೆ ಕಳೆದ ಸಾಲಿನಲ್ಲಿ ನಿರೀಕ್ಷಿತ ಹಣವನ್ನು ಸರಕಾರ ಬಿಡುಗಡೆಗೊಳಿಸದೆ, ಸಮಿತಿಯು ಎದುರಿಸಿದ ತೊಂದರೆಗಳ ಬಗ್ಗೆ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಸಭೆಯ ಗಮನ ಸೆಳೆದರಲ್ಲದೆ, ಸರಕಾರವು ಇದುವರೆಗೂ ಮಡಿಕೇರಿ ದಸರಾಕ್ಕೆ ನಿಗದಿತ ಅನುದಾನ ಪ್ರಕಟಿಸದಿರುವ ಹಿನ್ನೆಲೆ, ಇಂದಿಗೂ ಶಾಮಿಯಾನದವರಿಗೆ ಹಣ ಪಾವತಿ ಬಾಕಿ ಇರುವದಾಗಿ ಬೇಸರ ವ್ಯಕ್ತಪಡಿಸಿದರು. ಈ ಬಾರಿಯ ದಸರಾವನ್ನು ಯಾವ ರೀತಿ ಆಚರಿಸ ಬೇಕೆಂದು ಸಭೆಯ ಸಲಹೆ ಕೇಳಿದರು.
‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ, ಈಗಾಗಲೇ ದಸರಾ ಆಚರಣೆ ಸಂಬಂಧ, ದಶಮಂಟಪ ಸಮಿತಿಯು ಸರಳ ಹಾಗೂ ಸಂಪ್ರದಾಯಬದ್ಧವಾಗಿ ನಡೆಸುವ ದಿಸೆಯಲ್ಲಿ ಚರ್ಚಿಸಿರುವ ಬಗ್ಗೆ ಪ್ರಸ್ತಾಪಿಸಿ, ಸಂತ್ರಸ್ತರ ಭಾವನೆಗಳಿಗೆ ನೋವಾಗದಂತೆ ಹಾಗೂ ಅನಾವಶ್ಯಕ ವೆಚ್ಚ ಮಾಡದ ರೀತಿಯಲ್ಲಿ ಎಲ್ಲರಿಂದ ಕ್ರೋಢೀಕೃತ ತೀರ್ಮಾನದಂತೆ ನಾಡಹಬ್ಬ ಆಚರಿಸಬಹುದೆಂದು ಅವರು ಸಲಹೆ ನೀಡಿದರು. 30-35 ಲಕ್ಷ ವೆಚ್ಚದಲ್ಲಿ ಶಾಮಿಯಾನ ಹಾಕುವದನ್ನು ಈ ಬಾರಿ ಕೈಬಿಟ್ಟು ಕೊನೆಯ ದಿನದ ಕಾರ್ಯಕ್ರಮವನ್ನು ಅಲ್ಲಿ ನಡೆಸುವದು ಸೂಕ್ತ ಎಂದರು.
ದಶಮಂಟಪಗಳ ಸಮಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ತಾವು ಸರಕಾರದಿಂದ
(ಮೊದಲ ಪುಟದಿಂದ) ಲಭಿಸುವ ಅನುದಾನವನ್ನು ಅವಲಂಬಿಸಿ ದಾನಿಗಳು ಅಥವಾ ಸಾರ್ವಜನಿಕ ಹಣ ಸಂಗ್ರಹಿಸದೆ ಸಂಪ್ರದಾಯದಂತೆ ಮಂಟಪಗಳ ಮೆರವಣಿಗೆ ನಡೆಸಲು ತೀರ್ಮಾನಕೈಗೊಂಡಿರುವದಾಗಿ ಗಮನ ಸೆಳೆದರು.
ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ ಮಾತನಾಡಿ, ನಿರ್ದಿಷ್ಟ ಮೊತ್ತದ ಬಜೆಟ್ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸದೆ ಯಾವದೇ ಕಾರ್ಯಕ್ರಮ ರೂಪಿಸಲು ಸಾಧ್ಯವಾಗುತ್ತಿಲ್ಲವೆಂದು ಬೊಟ್ಟು ಮಾಡಿದರು. ಆ ದಿಸೆಯಲ್ಲಿ ದಸರಾ ಸಮಿತಿಯು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಪದಾಧಿಕಾರಿಗಳಾದ ಎಂ.ಬಿ. ದೇವಯ್ಯ, ಅಬ್ದುಲ್ ರಜಾಕ್, ಕೆ.ಎಸ್. ರಮೇಶ್, ಬಿ.ಎಂ. ರಾಜೇಶ್ ಅವರುಗಳು ಮಾತನಾಡಿ, ವರ್ಷದಿಂದ ವರ್ಷಕ್ಕೆ ದಸರಾ ಆಚರಣೆಯಲ್ಲಿ ಅದ್ಧೂರಿ ಕಂಡುಬಂದಿದ್ದರೂ, ಈ ಬಾರಿ ಎದುರಾಗಿರುವ ಪ್ರಾಕೃತಿಕ ವಿಕೋಪದಿಂದ ಸಂಪ್ರದಾಯ ಬದ್ಧ ಆಚರಣೆ ಅವಶ್ಯಕವೆಂದು ಪ್ರತಿಪಾದಿಸಿದರು. ಸರಳ ರೀತಿಯ ಮಂಟಪಕ್ಕೂ ಕನಿಷ್ಟ 8 ಲಕ್ಷ ಖರ್ಚಾಗಲಿದ್ದು, ಸರ್ಕಾರದ ಅನುದಾನದಲ್ಲಿ ಈ ಬಾರಿ ಮಂಟಪಗಳಿಗೆ ಹೆಚ್ಚಿನ ಮೊತ್ತ ಅಗತ್ಯವಿದೆ ಎಂದು ಇವರುಗಳು ಪ್ರತಿಪಾದಿಸಿದರು.
ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ ಮೊದಲು ಸರ್ಕಾರದ ಅನುದಾನ ಎಷ್ಟು ಲಭ್ಯ ಎಂದು ನಿಯೋಗ ಬೆಂಗಳೂರಿಗೆ ತೆರಳಿ ಅದಕ್ಕಾನುಸಾರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದರು. ಕವಿಗೋಷ್ಟಿ ಸಮಿತಿ ಅಧ್ಯಕ್ಷ ರಮೇಶ್ ಉತ್ತಪ್ಪ ಸಲಹೆ ನೀಡಿ, ಆದಷ್ಟು ಬೇಗನೆ ಉಪ ಸಮಿತಿಗಳಿಗೆ ಕಲ್ಪಿಸುವ ಅನುದಾನ ಕುರಿತು ಸ್ಪಷ್ಟನೆ ಲಭಿಸಿದರೆ ಪೂರಕ ವಾಗಿ ಕಾರ್ಯಕ್ರಮಗಳನ್ನು ರೂಪಿಸ ಬಹುದೆಂದು ಅಭಿಪ್ರಾಯಪಟ್ಟರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅವರು ಯಾವದೇ ಕಾರಣಕ್ಕೂ ದಸರಾನ ಅಚರಣೆಯಲ್ಲಿ ಸರಳತೆ ಅಗತ್ಯವಿಲ್ಲ ; ಪ್ರತಿ ವರ್ಷದಂತೆ ಈ ವರ್ಷವೂ ಜನೋತ್ಸವ ನಡೆಯಬೇಕೆಂದರು. ಪ್ರಕೃತಿ ವಿಕೋಪವನ್ನು ಮುಂದಿಟ್ಟುಕೊಂಡು ಸಾಂಪ್ರದಾಯಿಕ ಆಚರಣೆಯಲ್ಲಿ ಸರಳತೆ ತೋರುವ ಅಗತ್ಯತೆ ಏನಿದೆ ಎಂದು ಪ್ರಶ್ನಿಸಿದರಲ್ಲದೆ, ಶಿಸ್ತುಬದ್ಧ ಕಾರ್ಯಕ್ರಮ ನಡೆಯಲು ಬೈಲಾ ತಿದ್ದುಪಡಿಯ ಅವಶ್ಯಕತೆಯ ಬಗ್ಗೆ ಸಭೆಯ ಗಮನ ಸೆಳೆದರು.
ಬೈ.ಶ್ರೀ. ಪ್ರಕಾಶ್, ಅನಿತಾ ಪೂವಯ್ಯ, ಆರ್.ಬಿ. ರವಿ ಕುಮಾರ್, ಅಜ್ಜೇಟಿರ ಲೋಕೇಶ್, ಪ್ಯಾಟ್ರಿಕ್ ಲೋಬೋ, ವಿಕ್ಕಿ, ಬಿ.ಕೆ. ಅರುಣ್ ಕುಮಾರ್, ಮೊದಲಾದವರು ಸಲಹೆಗಳನ್ನು ನೀಡಿದರು. ಖಜಾಂಚಿ ಸಂಗೀತಾ ಪ್ರಸನ್ನ ರೂ. 76.73 ಲಕ್ಷದ ಖರ್ಚು ವೆಚ್ಚ ಮಂಡಿಸಿದರು. ಎಲ್ಲರ ಅಭಿಪ್ರಾಯ ಆಲಿಸಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಇವರುಗಳು, ಆದಷ್ಟು ಬೇಗನೆ ಈ ಬಾರಿಯ ದಸರಾ ಹಬ್ಬಕ್ಕೆ ಹೆಚ್ಚಿನ ಅನುದಾನ ಕೋರಿ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಬಳಿ ನಿಯೋಗ ತೆರಳುವದಾಗಿ ಪ್ರಕಟಿಸಿದರು.
ಆ ಬಳಿಕ ಸರಕಾರ ಕಲ್ಪಿಸುವ ಅನುದಾನಕ್ಕೆ ಪೂರಕ ಕಾರ್ಯಕ್ರಮಗಳನ್ನು ಈ ಬಾರಿ ನಿರ್ಧರಿಸುವ ಇಂಗಿತವನ್ನು ಚುಮ್ಮಿ ದೇವಯ್ಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಜಿ.ಎಂ. ಸರ್ತೀ ಪೈ, ನೂತನ ಆಯುಕ್ತ ಹಾಗೂ ಸದಸ್ಯ ಕಾರ್ಯದರ್ಶಿ ರಮೇಶ್, ಪಿ.ಟಿ. ಉನ್ನಿಕೃಷ್ಣ ಸೇರಿದಂತೆ ಇತರರು ಹಾಜರಿದ್ದರು.
ನಗರಸಭೆಯ ಇತರ ಸದಸ್ಯರು, ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ವಿವಿಧ ದೇವಾಲಯಗಳ ಪ್ರಮುಖರು ಹಾಜರಿದ್ದು ಅಭಿಪ್ರಾಯ ಹಂಚಿಕೊಂಡರು. ಸವಿತಾ ರಾಕೇಶ್ ಪ್ರಾರ್ಥನೆಯೊಂದಿಗೆ, ಚುಮ್ಮಿ ದೇವಯ್ಯ ಸ್ವಾಗತಿಸಿ, ಬಿ.ಕೆ. ಅರುಣ್ ಕುಮಾರ್ ವಂದಿಸಿದರು.