ಮಡಿಕೇರಿ, ಸೆ. 11: ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳಲ್ಲಿ ಮನೆ, ತೋಟ, ಗದ್ದೆಗಳಿಗೆ ಹಾನಿಯುಂಟಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದರೆ ಇತ್ತ ಜಾನುವಾರು, ವಾಹನಗಳಿಗೂ ಹಾನಿಯುಂಟಾಗಿವೆ. ಅತಿ ಹೆಚ್ಚು ಹಾನಿಗೀಡಾಗಿರುವ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂದಿಗೂ ಸಮರ್ಪಕವಾಗಿ ತೆರಳಲಾಗದ ಮೇಘತ್ತಾಳು ಗ್ರಾಮಗಳಲ್ಲಿ ಮನೆಯ ಬಳಿ ನಿಲ್ಲಿಸಿದ್ದ ವಾಹನಗಳು ಅನೇಕ ಅಲ್ಲಿಯೇ ಬಾಕಿ ಉಳಿದಿದ್ದವು. ಕೆಲವೊಂದು ಕೆಸರಿನಲ್ಲಿ ಮುಳುಗಿದ್ದವು. ಇದೀಗ ಮೊನ್ನೆಯಿಂದ ಬಿಸಿಲು ಬಂದುದರಿಂದ ಸದ್ಯ ಸ್ಥಳಕ್ಕೆ ತೆರಳುವಷ್ಟರ ಮಟ್ಟಿಗೆ ರಸ್ತೆ ದುರಸ್ತಿ ಆಗಿರುವದರಿಂದ ಸಂತ್ರಸ್ತರು ತಮ್ಮ ವಾಹನಗಳನ್ನು ಅಲ್ಲಿಂದ ರಕ್ಷಣೆ ಮಾಡುವ ಕಾಯಕದಲ್ಲಿದ್ದಾರೆ.
ವಿಕೋಪದಲ್ಲಿ ಸಿಲುಕಿದ್ದ ಜೀಪು, ಪಿಕ್‍ಅಪ್, ಬೊಲೇರೋ, ಮಾರುತಿ ವ್ಯಾನ್ ಮುಂತಾದ ವಾಹನಗಳನ್ನು ಹೇಗೋ ಸಾಗಿಸಲಾಗಿದೆ. ಇನ್ನು ಎರಡು ಮಾರುತಿ ವ್ಯಾನ್‍ಗಳು ಸಿಲುಕಿಕೊಂಡಿದ್ದು, ತೆರವುಗೊಳಿಸುವ ಪ್ರಯತ್ನ ಆಗುತ್ತಿದೆ.
ಕೊಳೆಯುತ್ತಿರುವ ಹಸು
ಮಕ್ಕಂದೂರುವಿನ ಸಬ್ಬಂಡ್ರ ಕುಟುಂಬಸ್ಥರು ನೆಲೆಸಿದ್ದ ಪ್ರದೇಶದಲ್ಲಿ ಸಾಕಷ್ಟು ಹಾನಿಗಳಾಗಿದ್ದು, ತೋಟ, ಮನೆ ಧ್ವಂಸಗೊಂಡಿವೆ. ಜಾನುವಾರುಗಳು ಸಾವನ್ನಪ್ಪಿವೆ. ಸಬ್ಬಂಡ್ರ ಚಿಣ್ಣಪ್ಪ ಎಂಬವರಿಗೆ ಸೇರಿದ ಹಸುವೊಂದು ಕೊಟ್ಟಿಗೆಯಲ್ಲಿಯೇ ಸಾವನ್ನಪ್ಪಿದ್ದು, ಅಲ್ಲಿಯೇ ಕೊಳೆಯುತ್ತಿದೆ. ಘಟನೆ ನಡೆದು 25 ದಿನಗಳಾದರೂ ಯಾರೂ ಇತ್ತ ಯುವಕರ ತಂಡ ಪ್ರತಿನಿತ್ಯ ಭೂಕುಸಿತಗೊಂಡ ಸ್ಥಳಗಳಲ್ಲಿ ಮನೆ ಕಳೆದುಕೊಂಡವರ ಮನೆಗಳಲ್ಲಿದ್ದ ವಸ್ತುಗಳಿಗಾಗಿ ಹುಟುಕಾಟ ನಡೆಸುವದು ಸಾಮಾನ್ಯವಾಗಿದೆ. ಮಕ್ಕಂದೂರು ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್ ಅವರ ಸಹೋದರಿ ಮೀನಾ ಗಂಗಾಧರ ಎಂಬವರ ಮನೆ ಹೆಬ್ಬೆಟ್ಟಗೇರಿಯಲ್ಲಿ ಇದೇ ದಿನ ಗೃಹಪ್ರವೇಶವಾಗಿತ್ತು. ಆದರೆ, ಮೊನ್ನೆಯ ಭೂಕುಸಿತಕ್ಕೆ ಮನೆಗೆ ಹಾನಿಯಾಗಿದೆ. ಮನೆಯಲ್ಲಿ ಎಲ್ಲ ಸಾಮಗ್ರಿಗಳೊಂದಿಗೆ 200 ಗ್ರಾಂ. ಚಿನ್ನ ಹಾಗೂ 30 ಸಾವಿರ ಹಣವಿತ್ತು. ಇಂದು ಮಕ್ಕಂದೂರುವಿನ ಯುವಕರ ತಂಡ ಹುಡುಕಾಟ ನಡೆಸಿದಾಗ ಕೆಲವು ಪಾತ್ರೆಗಳು ಮಾತ್ರ ಸಿಕ್ಕಿವೆ. ನಜ್ಜುಗುಜ್ಜಾಗಿದ್ದ ಪಾತ್ರೆಗಳನ್ನು ಗುಜರಿಗೆ ಕೊಟ್ಟು ಅದರಲ್ಲಿ ಸಿಕ್ಕ ರೂ. 1500 ಹಣವನ್ನು ಮೀನ ಅವರಿಗೆ ನೀಡಲಾಗಿದೆ. ಲಕ್ಷ ವೆಚ್ಚದಲ್ಲಿ ಕಟ್ಟಿದ್ದ ಮನೆಯವರಿಗೆ ಸಿಕ್ಕಿದ್ದು 1500 ಮಾತ್ರ.
ಇಂತಹ ಅದೆಷ್ಟೋ ಸನ್ನಿವೇಶಗಳು ಕಾಣಸಿಗುತ್ತಿವೆ. ಎಲ್ಲ ನಮ್ಮ ದೌಭಾಗ್ಯವೆಂದು ಮರುಗುವಂತಾಗಿದೆಯಷ್ಟೆ...