ಸೋಮವಾರಪೇಟೆ, ಸೆ. 12: ಆಹಾರ ಇಲಾಖೆ ಮೂಲಕ ವಿಶೇಷ ಅನ್ನಭಾಗ್ಯ ಯೋಜನೆಯಡಿ ಗ್ರಾ.ಪಂ.ಗೆ ತರಲಾದ ಪಡಿತರ ವಿತರಣೆ ಸಂದರ್ಭ ಗೊಂದಲ ಏರ್ಪಟ್ಟು, ವಿತರಣಾ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ ಘಟನೆ ಸಮೀಪದ ಚೌಡ್ಲು ಗ್ರಾ.ಪಂ.ನಲ್ಲಿ ನಡೆಯಿತು.

ಚೌಡ್ಲು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಚೌಡ್ಲು ವಿಎಸ್‍ಎಸ್‍ಎನ್‍ನಲ್ಲಿ 800, ಕಿಬ್ಬೆಟ್ಟ ನ್ಯಾಯಬೆಲೆ ಅಂಗಡಿಯಲ್ಲಿ 263, ಕಕ್ಕೆಹೊಳೆ ನ್ಯಾಯಬೆಲೆ ಅಂಗಡಿಯಲ್ಲಿ 575, ಗಾಂಧಿನಗರಕ್ಕೆ ಸಂಬಂಧಪಟ್ಟಂತೆ 215 ಪಡಿತರ ಚೀಟಿದಾರರಿದ್ದು, ಇದರಲ್ಲಿ ಇಲಾಖೆಯಿಂದ ಚೌಡ್ಲು ಮತ್ತು ಕಿಬ್ಬೆಟ್ಟ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಪಡಿತರದಾರರಿಗೆ 1063 ಕಿಟ್‍ಗಳನ್ನು ಪಂಚಾಯಿತಿಗೆ ನೀಡಲಾಗಿತ್ತು.

ಈ ಮಧ್ಯೆ ಚೌಡ್ಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಎಲ್ಲಾ ಪಡಿತರದಾರರಿಗೆ ಕಿಟ್ ವಿತರಿಸುತ್ತಾರೆ ಎಂಬ ಮಾಹಿತಿ ಗ್ರಾಮ ಪಂಚಾಯಿತಿಯಾದ್ಯಂತ ಹರಿದಾಡಿದ್ದು, ಎಲ್ಲೆಡೆಯ ಗ್ರಾಹಕರು ಪಂಚಾಯಿತಿ ಆವರಣದಲ್ಲಿ ಜಮಾಯಿಸಿದರು.

ಆದರೆ ಇರುವ 1063 ಕಿಟ್‍ಗಳಲ್ಲಿ ಕೆಲವರಿಗೆ ವಿತರಿಸುತ್ತಿದ್ದಂತೆ ಗೊಂದಲ ಏರ್ಪಟ್ಟಿತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಎಲ್ಲರೂ ಬಡವರೇ ಇದ್ದು, ಎಲ್ಲರಿಗೂ ಕಿಟ್ ವಿತರಿಸಬೇಕು. ಕೆಲವರಿಗೆ ಮಾತ್ರ ಕಿಟ್ ವಿತರಿಸುವ ಕ್ರಮ ಸರಿಯಲ್ಲ. ಕೊಡುವದಿದ್ದರೆ ಎಲ್ಲರಿಗೂ ಕೊಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಹಾರ ಇಲಾಖೆ ಮೂಲಕ ಎರಡು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಗ್ರಾಹಕರಿಗೆ ಕಿಟ್ ಬಂದಿದ್ದು, ಇಲಾಖೆಯವರು ನೀಡಿರುವ ಪಟ್ಟಿಯಂತೆ ವಿತರಣೆ ಮಾಡುತ್ತೇವೆ ಎಂದು ಗ್ರಾ.ಪಂ. ಅಧಿಕಾರಿಗಳು ಮಾಡಿದ ಮನವೊಲಿಸುವ ಪ್ರಯತ್ನವೂ ವಿಫಲವಾಯಿತು.

ಮಧ್ಯಾಹ್ನದವರೆಗೂ ಈ ಬಗ್ಗೆ ಗೊಂದಲಗಳೇ ನಡೆದು ಅಂತಿಮವಾಗಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಚೀಟಿದಾರರಿಗೂ ಪಡಿತರ ಬಂದ ನಂತರ ವಿತರಿಸಲು ಕ್ರಮ ಕೈಗೊಳ್ಳುವದಾಗಿ ತಿಳಿಸಿ, ಕಿಟ್ ವಿತರಣಾ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು.