*ಸಿದ್ದಾಪುರ, ಸೆ. 12: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಅಭ್ಯತ್ಮಂಗಲ ವಾರ್ಡ್ನ ಸಂತ್ರಸ್ತರಿಗೆ ಯಾವದೇ ಅಹಾರ ಸಾಮಗ್ರಿಗಳನ್ನು ಇದುವರೆಗೂ ತಲುಪಿಸದೇ ವಂಚಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿ ಆರೋಪಿಸಿದ್ದು, ಜಿಲ್ಲಾ ಪಂಚಾಯತ್ ಸದಸ್ಯರನ್ನು ಒಳಗೊಂಡ ನಿಯೋಗ ಇಂದು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯೆ ಸುನೀತ ಮಂಜುನಾಥ್ ಈಚೆಗೆ ಸೋಮವಾರಪೇಟೆ ತಾಲೂಕು ಅಹಾರ ಮತ್ತು ಕಂದಾಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ನೆರೆ ನೆರವು ಪ್ರತಿಯೊಬ್ಬರಿಗೂ ಸಮಾನವಾಗಿ ತಲಪಬೇಕು ಎಂದು ಮನವಿ ಮಾಡಿದ್ದರು. ಆದರೂ ತಾರತಮ್ಯ ನಿಂತಿಲ್ಲ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿದೆ. ಉಳಿದೆಡೆ ನೆರೆ ಸಂತ್ರಸ್ತರಿಗೆ ಆಹಾರ ಸೇರಿದಂತೆ ಇತರೆ ನೆರವು ಒದಗುತ್ತಿದ್ದು, ವಾಲ್ನೂರು-ತ್ಯಾಗತ್ತೂರು, ನಂಜರಾಯಪಟ್ಟಣ ಮತ್ತು ಇತರೆ ಭಾಗಗಳ ಸಂತ್ರಸ್ತರಿಗೆ ಯಾವದೇ ನೆರವು ಒದಗಿಸದ ಕಾರಣ ಸಂತ್ರಸ್ತರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ನಂಜರಾಯಪಟ್ಟಣ್ಣ ತಾಲೂಕು ಪಂಚಾಯಿತಿ ಸದಸ್ಯ ಮೊಣ್ಣಂಡ ವಿಜು ಚಂಗಪ್ಪ, ಅಂಚೆಮನೆ ಸುಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆರೆ ಪರಿಹಾರ ವಿತರಣೆ ಅಸಮರ್ಪಕವಾಗಿದ್ದು ನಂಜರಾಪಟ್ಟಣದಲ್ಲಿ ಒಟ್ಟು 2 ವಾರ್ಡ್ ಇದ್ದು ಇಲ್ಲಿನ ನ್ಯಾಯಬೆಲೆ ಅಂಗಡಿಗೆ ಸಂಬಂಧಿಸಿದ ಜನರಿಗೆ ಬಂದಿರುವ ಆಹಾರ ಸಾಮಗ್ರಿ ಕಿಟ್ನ್ನು ಗುಡ್ಡೆಹೊಸೂರು ಮತ್ತು ವಿರುಪಾಕ್ಷಪುರ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ವಿತರಿಸಿದ್ದಾರೆ. ಅಧಿಕಾರಿಗಳ ವೈಜ್ಞಾನಿಕ ವಾಗಿ ನೆರೆ ಸಂತ್ರಸ್ತರ ಹೆಸರನ್ನು ಪಟ್ಟಿ ಮಾಡದ ಹಿನ್ನೆಲೆಯಲ್ಲಿ ಗೊಂದಲ ಏರ್ಪಟ್ಟಿದೆ ಎಂದು ಆರೋಪಿಸಿದ್ದಾರೆ.