ಶನಿವಾರಸಂತೆ, ಸೆ. 12: ಇಲ್ಲಿಗೆ ಸಮೀಪದ ಕೊಡ್ಲಿಪೇಟೆ ಪುರಾಣೇತಿಹಾಸ ಪಟ್ಟಣವಾಗಿದ್ದು, ಕೊಡಗನ್ನಾಳಿದ ಹಾಲೇರಿ ಅರಸರ ಸರಹದ್ದಾಗಿದೆ. ಇಲ್ಲಿನ ಕಲ್ಲುಮಠ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂಬ ಪ್ರತೀತಿ ಇದೆ. ಮಠವನ್ನು ಹೆಸರೇ ಸೂಚಿಸುವಂತೆ ಸಂಪೂರ್ಣ ಕಲ್ಲಿನಿಂದಲೇ ಕಟ್ಟಲಾಗಿದೆ. ಕಲ್ಲಿನ ಕಂಬ, ತೊಲೆ, ಚಪ್ಪಡಿಗಳಿಂದ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಮಹಾಂತಸ್ವಾಮೀಜಿ ಮಠಾಧೀಶರಾಗಿ ಕಾಯಕ ಯೋಗಿಯಂತೆ ಶ್ರಮಿಸುತ್ತಿದ್ದಾರೆ.

1806ರಲ್ಲಿ ಕೊಡಗಿನ ರಾಜ ವೀರರಾಜೇಂದ್ರ 80 ಎಕರೆ ಭೂಮಿಯನ್ನು ಕಲ್ಲುಮಠಕ್ಕೆ ಉಂಬಳಿಯಾಗಿ ನೀಡಿದ್ದು, ಇದರಲ್ಲಿ 30 ಎಕರೆ ಭೂಮಿ ಹೇಮಾವತಿ ನದಿ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಉಳಿದ 50 ಎಕರೆ ಭೂಮಿಯಲ್ಲಿ ಪ್ರಸ್ತುತ ಗದ್ದೆ, ಕಾಫಿತೋಟ ಇತ್ಯಾದಿ ಕೃಷಿ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಪುರಾತನ ನೆನಪಿಗಾಗಿ, ವೀರಶೈವ ಧರ್ಮದ ಆಚಾರ - ವಿಚಾರ ಅನುಷ್ಟಾನಕ್ಕಾಗಿ ಕೊಡಗಿನಲ್ಲಿ 63 ಮಠಗಳನ್ನು ಸ್ಥಾಪನೆ ಮಾಡಿದ್ದು, ಕೆಲವು ಮಠಗಳು ಈಗಲೂ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ.

ಮೂಲತಃ ಉತ್ತರ ಕರ್ನಾಟಕದ ಕೂಡ್ಲಿಗಿಯಿಂದ ಬಂದ ಕೂಡ್ಲಿಗಿ ಮಹಾಂತ ಸ್ವಾಮೀಜಿ ಕಲ್ಲುಮಠದ ಪ್ರಥಮ ಗುರುಗಳಾಗಿದ್ದಾರೆ. 1806ರಿಂದ 1886ರವರೆಗೆ, ಅವರ ನಂತರ 1886ರಿಂದ 1928ರವರೆಗೆ ಸೋಮಶೇಖರ ಸ್ವಾಮೀಜಿ, 1928ರಿಂದ 1976ರವರೆಗೆ ನಂಜುಂಡ ಸ್ವಾಮೀಜಿ ಮಠಾಧ್ಯಕ್ಷರಾಗಿದ್ದು, ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

1976ರಿಂದ ಕಲ್ಲುಮಠದ ಪೀಠಾಧ್ಯಕ್ಷರಾದ ಮಹಾಂತ ಸ್ವಾಮೀಜಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದು, ಕಾಯಕಯೋಗಿಯಾಗಿ ಕೈಂಕರ್ಯ ಮಾಡುತ್ತಾ ಗುರುವಂದನೆ, ಲಿಂಗೈಕ್ಯ ನಂಜುಂಡಸ್ವಾಮಿ ಆರಾಧನೆ, ಬಸವ ಜಯಂತಿ, ಶಿವಾನುಭವ ಗೋಷ್ಠಿ, ಧಾರ್ಮಿಕ ಚಿಂತನೆ, ಬಸವತತ್ವ ಪ್ರಚಾರ, ದೀಕ್ಷಾ ಸಂಸ್ಕಾರ, ದತ್ತಿನಿಧಿ, ತಿಂಗಳ ಚಿಂತನಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಮೊದಲಿಗೆ ಗುಡಿಸಲಿನಲ್ಲಿ ಆರಂಭವಾದ ಮಠ, ಕೈ ಹಂಚಿನದಾಗಿ ಬಳಿಕ 32 ಕಲ್ಲಿನ ಬೃಹತ್ ಗಾತ್ರದ ಕಂಬಗಳ ಮಠವಾಗಿ ಪರಿವರ್ತಿತಗೊಂಡಿದೆ. ಕಂಬಗಳಲ್ಲಿ ಹಾಗೂ ಮೇಲ್ಛಾವಣಿಯಲ್ಲಿ ದೇವರ, ಶಿಲಾಬಾಲಕಿಯರ, ಪ್ರಾಣಿ, ಪ್ರಕೃತಿಯ ಚಿತ್ರಗಳಿದ್ದು, ಆಕರ್ಷಣೀಯವಾಗಿವೆ. ಪರಶುರಾಮನ ತಂದೆ - ತಾಯಿ ಜಮದಗ್ನಿ- ರೇಣುಕೆಯರು ವಾಸವಾಗಿದ್ದರೆಂದು ಹೇಳಲಾಗುವ ಪೂರ್ವಾಭಿಮುಖವಾಗಿರುವ ಮಠದಲ್ಲಿ ಉತ್ತರಾಭಿಮುಖವಾಗಿ ಇಚ್ಛಾಮರಣಿಗಳಾದ ಚಂದ್ರಶೇಖರ ಸ್ವಾಮೀಜಿ ಹಾಗೂ ನಂಜುಂಡ ಸ್ವಾಮೀಜಿಗಳ ಗದ್ದುಗೆಗಳಿವೆ.

ಮಹಾಂತಸ್ವಾಮೀಜಿ ಶಿಕ್ಷಣಕ್ಕೆ ಮಹತ್ವ ನೀಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯೆ ನೀಡಬೇಕೆಂಬ ಸದುದ್ದೇಶ ಹೊಂದಿ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಹಾಗೂ ಸಾಹಿತಿ ಚಂದ್ರಶೇಖರ ಮಲ್ಲೋರಹಟ್ಟಿ ಅವರ ಪ್ರೋತ್ಸಾಹದಿಂದ 2002ರಲ್ಲಿ ಶ್ರೀ ನಂಜುಂಡಸ್ವಾಮಿ ವಿದ್ಯಾಪೀಠವನ್ನು ಸ್ಥಾಪಿಸಿದರು. ಪೂರ್ವ ಪ್ರಾಥಮಿಕ ಶಾಲೆಯಿಂದ ಆರಂಭವಾಗಿ ಪ್ರಸ್ತುತ ರೂ. 50 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವಾಗಿ ಪ್ರಾಥಮಿಕ, ಪ್ರೌಢಶಾಲೆಯಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ. ಸಂಸ್ಕøತ ಪಾಠಶಾಲೆಯೂ ಆಗಿದೆ. ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ಪಡೆಯುತ್ತಿದೆ. ಪ್ರಸ್ತುತ ಶಾಲೆಯಲ್ಲಿ 700 ವಿದ್ಯಾರ್ಥಿಗಳು ಕಲಿಯುತ್ತಿದ್ದು, 32 ಅನುಭವೀ ಶಿಕ್ಷಕರಿದ್ದಾರೆ. ಕಂಪ್ಯೂಟರ್ ಸೇರಿದಂತೆ ವಿವಿಧ ಸೌಲಭ್ಯಗಳು, ಆಟದ ಮೈದಾನ, ವಾಹನ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಎಕ್ಸ್‍ಪರ್ಟ್ ಕ್ಲಾಸ್, ನೃತ್ಯ, ಸಂಗೀತ ತರಗತಿಗಳ ಆರಂಭ ಹಾಗೂ ಈಜುಕೊಳ ನಿರ್ಮಾಣದ ಉದ್ದೇಶವಿದೆ ಎಂಬ ಅಭಿಪ್ರಾಯ ಸ್ವಾಮೀಜಿಯವರದ್ದಾಗಿದೆ.

-ನರೇಶ್ಚಂದ್ರ, ಶನಿವಾರಸಂತೆ.