ಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವವರಿಗೆ ಕಳೆದ ವಾರವಷ್ಟೆ ಪರಿಹಾರ ಸಾಮಗ್ರಿಗಳನ್ನು ನೀಡಿ ಹಿಂದಿರುಗಿ ಬೆಂಗಳೂರಿನ ಸಮರ್ಥ ಭಾರತ ಸಂಘಟನೆ ಇದೀಗ ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಮಾಡಲಿಚ್ಚಿಸುವ ಕೊಡಗಿನ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಉದ್ಯೋಗದ ವ್ಯವಸ್ಥೆ ಮಾಡಲು ಮುಂದಾಗಿದೆ. ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ತಮ್ಮಿಂದಾಗುವ ಸೇವೆ ಮಾಡಬೇಕೆನ್ನುವ ಸದುದ್ದೇಶದೊಂದಿಗೆ ಮೂಲತಃ ಕೊಡಗಿನವರಾದ ಬೆಂಗಳೂರಿನ ನಿವಾಸಿ ಯಂ.ಜಿ. ಪ್ರೇಮಾನಂದ್ ಅವರು ಬೆಂಗಳೂರಿನ ಸಮರ್ಥ ಭಾರತ ಸಂಘಟನೆಯ ನೇತೃತ್ವದಲ್ಲಿ ಮುಂದಡಿಯಿಟ್ಟಿದ್ದಾರೆ. ಬೆಂಗಳೂರು ಮಹಾನಗರದಲ್ಲಿ ಉದ್ಯೋಗ ಮಾಡಲಿಚ್ಚಿಸುವ ಕೊಡಗಿನ ಅರ್ಹ ವಿದ್ಯಾವಂತ, ಅವಿದ್ಯಾವಂತ ನಿರುದ್ಯೋಗಿಗಳಿಗೂ ಅವರವರ ಅರ್ಹತೆಯ ಆಧಾರದಲ್ಲಿ ಆಯ್ಕೆಗಳಿದ್ದು, ಈ ಅವಕಾಶವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ತಮ್ಮ ಮುಂದಿನ ಬದುಕನ್ನು ಸ್ವಾಭಿಮಾನದಿಂದ ಕಳೆಯುವಂತಾಗಲು ಸಮರ್ಥ ಭಾರತ ಬಯಸುತ್ತದೆಂದು ಪ್ರೇಮಾನಂದ್ ತಿಳಿಸಿದರು. ಬೆಂಗಳೂರಿಗೆ ಆಗಮಿಸಿ ಉದ್ಯೋಗ ಮಾಡ ಬಯಸುವವರಿಗೆ ಅಗತ್ಯವಿದ್ದಲ್ಲಿ ಗರಿಷ್ಠ ಮೂರು ತಿಂಗಳುಗಳ ಕಾಲ ಸಂಪೂರ್ಣ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಮರ್ಥ ಭಾರತ ಸಂಘಟನೆಯ ವತಿಯಿಂದ ಒದಗಿಸಲಾಗುವದೆಂದು ಪ್ರೇಮಾನಂದ್ ಮಾಹಿತಿ ನೀಡಿದರು. ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳಿಗಾಗಿ ಯಂ.ಜಿ. ಪ್ರೇಮಾನಂದ್ ಬೆಂಗಳೂರು ಮೊ. 9845448571 ಅಥವಾ ಕುಮಾರ್ ಕೂರ್ಗ್ ಮೊ. 9845178711 ಇವರುಗಳನ್ನು ಸಂಪರ್ಕಿಸಲು ಕೋರಿದೆ.