ಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಅನಾಹುತವನ್ನು ಸರಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳೊಂದಿಗೆ, ಕರ್ನಾಟಕ ಮತ್ತು ಇತರೆಡೆಯ ಜನತೆ ಎಲ್ಲ ರೀತಿಯ ನೆರವು ಕಲ್ಪಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಸಹಾಯಕ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ.ಬೆಂಗಳೂರು ವಕೀಲರ ಸಂಘ ಮತ್ತು ಮಡಿಕೇರಿ ವಕೀಲರ ಸಂಘದ ಆಶ್ರಯದಲ್ಲಿ ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರುಗಳಿಗೆ ಸಹಾಯಧನ ವಿತರಿಸಿದ ಬಳಿಕ ಅವರು, ಪ್ರಾಕೃತಿಕ ವಿಕೋಪದಿಂದ ಅಪಾರ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ವಕೀಲರ ತಂಡದೊಂದಿಗೆ ತೆರಳಿ ಖುದ್ದು ಪರಿಶೀಲಿಸಿದರು.
ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಪೊನ್ನಣ್ಣ, ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಅನಾಹುತಗಳನ್ನು ರಾಜ್ಯ ಹಾಗೂ ದೇಶದ ಜನತೆ ಎದುರು ಪತ್ರಿಕೆಗಳು, ದೃಶ್ಯ ಮಾದ್ಯಮಗಳು ಬಿಂಬಿಸಿರುವ ಸನ್ನಿವೇಶವನ್ನು ಪ್ರತ್ಯಕ್ಷ ನೋಡುತ್ತಿರು ವದಾಗಿ ನುಡಿದರಲ್ಲದೆ, ಭೂಕುಸಿತದ ಭೀಕರತೆಯೊಂದಿಗೆ ಜಲಸ್ಫೋಟದಿಂದ ಎದುರಾಗಿರುವ ಅನಾಹುತಗಳಿಗೆ ಆತಂಕ ವ್ಯಕ್ತಪಡಿಸಿದರು. ನಗರದ ಮಂಗಳೂರು ರಸ್ತೆ ಮದೆ, ಮೊಣ್ಣಂಗೇರಿ, ಜೋಡುಪಾಲ ವ್ಯಾಪ್ತಿಯ ಹೆದ್ದಾರಿಯ ಇಕ್ಕಡೆಗಳಲ್ಲಿ ಸಂಭವಿಸಿರುವ ಪ್ರಾಕೃತಿಕ ದುರಂತ ಕಂಡು ಮರುಗಿದ ಪೊನ್ನಣ್ಣ, ಈಗಿನ ಪರಿಸ್ಥಿತಿಯಲ್ಲಿ
(ಮೊದಲ ಪುಟದಿಂದ) ಎಲ್ಲರೂ ಸೇರಿ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಿಸುವಲ್ಲಿ ಕೈಜೋಡಿಸಬೇಕೆಂದು ಕಳಕಳಿ ವ್ಯಕ್ತಪಡಿಸಿದರು.
ಸೇವೆಗೆ ಅವಕಾಶ: ನಮ್ಮ ಬದುಕಿನಲ್ಲಿ ಎದುರಾಗಲಿರುವ ಅನೇಕ ದುರಂತಗಳ ಸಂದರ್ಭ, ಪರಿಸ್ಥಿತಿಯ ಎದುರು ಸೇವೆ ಸಲ್ಲಿಸಲು ಅವಕಾಶ ಲಭಿಸಲಿದೆ ಎಂದು ಬಣ್ಣಿಸಿದ ಅವರು, ಇದೀಗ ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪದ ನಡುವೆ ಎಲ್ಲರಿಗೂ ಉತ್ತಮ ಸೇವೆ ಗೊಂದು ಅವಕಾಶ ಲಭಿಸಿರುವದಾಗಿ ನೆನಪಿಸಿದರು.
ಕೊಡಗಿನ ಜತೆಗಿದ್ದೇವೆ: ಪ್ರಸಕ್ತ ಕೊಡಗಿಗೆ ಅನೇಕ ಕಡೆಗಳಿಂದ ಎಲ್ಲ ರೀತಿ ನೆರವು ಹರಿದು ಬಂದಿದ್ದು, ವಕೀಲ ಸಮೂಹವೂ ಸಂತ್ರಸ್ತ ರೊಂದಿಗೆ ಇದ್ದೇವೆ ಎಂಬ ಸಂದೇಶ ವನ್ನು ಈ ಮೂಲಕ ರವಾನಿಸಲು ಪ್ರಯತ್ನ ನಡೆದಿದೆ ಎಂದು ಅವರು ಮಾರ್ನುಡಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕಾರೇರ ಕವನ್, ಉಪಾಧ್ಯಕ್ಷ ಪಿ.ಯು. ಪ್ರೀತಂ, ಕಾರ್ಯದರ್ಶಿ ಡಿ.ಜಿ. ಕಿಶೋರ್, ಖಜಾಂಚಿ ಜ್ಯೋತಿ ಶಂಕರ್ ಸೇರಿದಂತೆ ಉಭಯ ಸಂಘಟನೆಗಳ ವಕೀಲರು ಮದೆ, ಮೊಣ್ಣಂಗೇರಿ, ಮಕ್ಕಂದೂರು ಸುತ್ತಮುತ್ತಲಿನ ಪ್ರಾಕೃತಿಕ ವಿಕೋಪದ ಅನಾಹುತಗಳನ್ನು ವೀಕ್ಷಿಸಿದರು.