ಮಡಿಕೇರಿ, ಸೆ. 14: ತಿಂಗಳ ಹಿಂದೆ ಸಂಭವಿಸಿದ ಪ್ರಕೃತಿ ವಿಕೋಪ ದುರಂತದಲ್ಲಿ ಮನೆ ಸಹಿತ ಮಣ್ಣಿನಡಿ ಸಮಾಧಿಯಾಗಿದ್ದ ಮಕ್ಕಂದೂರು ಗ್ರಾಮ ಪಂಚಾಯಿತಿಯ ಹೆಮ್ಮೆತ್ತಾಳು ಗ್ರಾಮದ ಚಂದ್ರವತಿ ಹಾಗೂ ಉಮೇಶ್ ರೈ ಅವರುಗಳ ಮನೆಯಿದ್ದ ಸ್ಥಳದಲ್ಲಿ ಪಳೆಯುಳಿಕೆಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ಚಿನ್ನಾಭರಣ ಸೇರಿದಂತೆ ಪಾತ್ರೆ - ಪಗಡೆಗಳು ಒಂದಿಷ್ಟು ಹಣ ಪತ್ತೆಯಾಗಿದೆ.ಕಳೆದ ತಿಂಗಳ 16 ರಂದು ಸಂಭವಿಸಿದ ದುರಂತದಲ್ಲಿ ಚಂದ್ರವತಿ ಹಾಗೂ ಮಗ ಉಮೇಶ್ ರೈ ಮಣ್ಣಿನಡಿ ಸಮಾಧಿಯಾಗಿದ್ದರು. ಘಟನೆ ನಡೆದು 9 ದಿನಗಳ ಬಳಿಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರ ತೆಗೆಯಲಾಗಿತ್ತು. ಇದೀಗ ಮಳೆ ಕಡಿಮೆಯಾಗಿ ಬಿಸಿಲು ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮದ ಯುವಕರ ತಂಡ ಮನೆ ಇದ್ದ ಸ್ಥಳದಲ್ಲಿ ವಸ್ತುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂದು ನಡೆದ ಕಾರ್ಯಾಚರಣೆ ವೇಳೆ ಮೃತೆ ಚಂದ್ರವತಿ ಅವರಿಗೆ ಸಂಬಂಧಿಸಿದ ಎರಡು ಪೆಟ್ಟಿಗೆಗಳು ಸಿಕ್ಕಿವೆ. ಒಂದರಲ್ಲಿ ಬೆಲೆಬಾಳುವ ಸೀರೆಗಳು ಸೇರಿದಂತೆ ಬಟ್ಟೆ, ಕಂಬಳಿ ಸಿಕ್ಕಿವೆ. ಮತ್ತೊಂದು ಪೆಟ್ಟಿಗೆಯಲ್ಲಿ ಚಿನ್ನದ ಬಳೆಗಳು, ಸರ, ಉಂಗುರ, ವಾಲೆಗಳು ಸಿಕ್ಕಿವೆ. ಜೊತೆಗೆ ರೂ. 950 ನಗದು ಹಾಗೂ
(ಮೊದಲ ಪುಟದಿಂದ) ಸುಮಾರು 3 ಸಾವಿರದಷ್ಟು ಸಂಗ್ರಹಿಸಿಟ್ಟಿದ್ದ ನಾಣ್ಯಗಳು ಸಿಕ್ಕಿವೆ. ಇನ್ನಷ್ಟು ನಾಣ್ಯಗಳು ಮಣ್ಣಿನಡಿ ಸೇರಿದ್ದು, ತೆಗೆಯಲು ಸಾಧ್ಯವಾಗುತ್ತಿಲ್ಲ. ಹಿತ್ತಾಳೆ ಪಾತ್ರೆಗಳು, ಒಂದು ಸಿಲಿಂಡರ್ ನೊಂದಿಗೆ ಉಮೇಶ್ ಪಠಿಸುತ್ತಿದ್ದ ಭಗವದ್ಗೀತೆ ಗ್ರಂಥ ಹಾಗೂ ಪೂಜೆಗೆ ಬಳಸುತ್ತಿದ್ದ ಬೆಳ್ಳಿಯ ದೀಪಗಳು ಸಿಕ್ಕಿವೆ. ಇನ್ನುಳಿದಂತೆ ಉಮೇಶ್ ರೈಗೆ ಸೇರಿದ ಯಾವದೇ ವಸ್ತುಗಳು ಸಿಕ್ಕಿಲ್ಲ. ಮುಂದಿನ ವಾರದಲ್ಲಿ ಮತ್ತೆ ಕಾರ್ಯಾಚರಣೆ ನಡೆಯಲಿದೆ. ಈ ಸಂದರ್ಭ ಪಕ್ಕದಲ್ಲಿ ಪಳೆಯುಳಿಕೆಯಂತೆ ನಿಂತಿರುವ ಎಂ.ಕೆ. ಗೋಪಾಲ ಅವರಿಗೆ ಸೇರಿದ ಮನೆಯ ಬಳಿ ಹುಡುಕಾಟ ನಡೆಸಲಾಗುವದು.
ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್, ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಉಮೇಶ್ ರೈ, ಸಹೋದರ ವಸಂತ್ ರೈ, ಸಂಬಂಧಿ ಶ್ರೀನಿವಾಸ ರೈ, ಗ್ರಾಮದ ಯುವಕರಾದ ದಿನೇಶ್, ಜಯಕುಮಾರ್, ಲವ, ಶರತ್, ನೀಲ್, ರಂಜು ಗಣಪತಿ ಇನ್ನಿತರರು ಪಾಲ್ಗೊಂಡಿದ್ದರು.