ದಕ್ಷಿಣದ ಕಾಶ್ಮೀರ, ಭಾರತದ ಸ್ವಿಜರ್‍ಲ್ಯಾಂಡ್ ಎಂದೆಲ್ಲ ಪ್ರಖ್ಯಾತಿ ಹೊಂದಿದ ನಾಡು ನಮ್ಮ ಕೊಡಗು. ಸುಂದರವಾದ ಬೆಟ್ಟ ಗುಡ್ಡ, ಬಾನೆತ್ತರಕ್ಕೆ ಬೆಳೆದು ನಿಂತ ಗಿಡ ಮರಗಳಿಂದ ಕೂಡಿ, ಹಚ್ಚ ಹಸಿರಿನಿಂದ ಸರ್ವರನ್ನು ಕೈ ಬೀಸಿ ಕರೆಯುವ ಜಿಲ್ಲೆ. ಇಂತಹ ಪ್ರಕೃತಿಯ ರಮಣೀಯತೆಯನ್ನು ಹೊಂದಿದ ನಾಡಿನಲ್ಲಿ ಕಾಮೇರಮ್ಮನ ಪುಣ್ಯಕ್ಷೇತ್ರದಲ್ಲಿ ಜನ್ಮವಿತ್ತ ನಾವೇ ಧನ್ಯರು. ಆದರೆ ಇಂತಹ ಸುಂದರವಾದ ಕೊಡವರ ನಾಡು ಇತ್ತೀಚೆಗೆ ಪ್ರಕೃತಿಯ ವಿಕೋಪಕ್ಕೆ ತುತ್ತಾಯಿತು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾಲೇರಿ ನಾಡಿನಲ್ಲಿ ಕಾಂಡನಕೊಲ್ಲಿ ಎಂಬದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ನಾವು (ಮನಿಯಪ್ಪನ ಕುಟುಂಬಸ್ಥರು) ವಾಸವಿದ್ದೆವು. ಅಂದು ಜುಲೈ 9. ಸಮಯ ಮಧ್ಯಾಹ್ನ 12.55 ಈ ಸಮಯದಲ್ಲಿ ಭೂಮಿ ನಡುಗಿದ ಶಬ್ದ ಕೇಳಿ ಬಂತು. ಈ ಶಬ್ದದೊಂದಿಗೆ ಕಿಟಕಿ ಬಾಗಿಲುಗಳು ಹಾಗೂ ಪಾತ್ರೆಗಳು ಅಲುಗಾಡಿದವು. ನಾನು ಬಾಣಂತಿ ಆರೈಕೆಗಾಗಿ ತವರು ಮನೆಗೆ ಹೋಗಿದ್ದರಿಂದ ನಾನು ಈ ಶಬ್ದದ ಅನುಭವ ಪಡೆಯಬೇಕಾಯಿತು. ಮಗುವನ್ನು ಮಲಗಿಸಿಕೊಂಡಿದ್ದ ವೇಳೆ ಈ ಕಂಪನಕ್ಕೆ ಹೆದರಿ ಮಗುವನ್ನು ಎತ್ತಿಕೊಂಡು ಹೊರ ಓಡಿ ಬಂದೆ. ಅಮ್ಮ ಕೂಡ ಒಳಗೆ ಏನೋ ಕೆಲಸದಲ್ಲಿ ಇದ್ದವರು ಏನೋ ಬಿದ್ದು ಹೋಯಿತು ಎಂದು ಹೇಳಿಕೊಂಡು ಓಡಿ ಬಂದರು. ಸ್ವಲ್ಪ ಸಮಯದಲ್ಲೇ ಕೊಡಗಿನಲ್ಲಿ ಲಘು ಭೂಕಂಪವಾಗಿದೆ ಎಂದು ಸುದ್ದಿ ಹರಡಿತು.

ಆ ಬಳಿಕ ಪ್ರಳಯ ಸಂಭವಿಸುವ ಮುಂಚಿತವಾಗಿಯೇ ನಾನು ಮತ್ತು ಮಗು, ತಮ್ಮಂದಿರು, ಅಮ್ಮ ಎಲ್ಲರೂ ಕೂಡ ಅದೃಷ್ಟವಶಾತ್ ಬಚಾವಾಗಿದ್ದೆವು. ಬಾಣಂತಿ ಆರೈಕೆಯಲ್ಲಿ ಇದ್ದ ನಾನು ಮಗುವಿಗೆ 60 ದಿನ ತುಂಬಿದ ಹಾಗೆ 61ನೇ ದಿನಕ್ಕೆ ನನ್ನ ದೊಡ್ಡ ಮಗನ ಒತ್ತಾಯದ ಮೇರೆಗೆ ಐಕೊಳಕ್ಕೆ ಬಂದೆ. ಹೀಗೆ ನಾನು ಮತ್ತು ಮಗು ಬಚಾವಾದೆವು. ಇನ್ನೂ ಸಣ್ಣ ತಮ್ಮನಿಗೆ ಉದ್ಯೋಗ ಸಿಕ್ಕಿದ್ದರಿಂದ ಜಲ ಪ್ರಳಯವಾಗುವದಕ್ಕೆ ಒಂದು ವಾರ ಮುಂಚಿತವಾಗಿ ಅವನು ಬೆಂಗಳೂರು ಸೇರಿದ್ದ. ದೊಡ್ಡ ತಮ್ಮ ತೇಜಸ್ ಮತ್ತು ಅಮ್ಮ. ಒಂದು ದಿನಕ್ಕೆ ಮುಂಚಿತವಾಗಿ ಬಚಾವಾಗಿದ್ದರು. ಅದು ಹೇಗೆಂದರೆ, ನನ್ನ ಅಕ್ಕ ಬಾವನವರು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಆಗಸ್ಟ್ 15 ರಂದು ಹೊರಟಿದ್ದರು. ಆದ್ದರಿಂದ ಇವರಿಬ್ಬರನ್ನು ನಮ್ಮ ಜೊತೆ ದೇವಸ್ಥಾನಕ್ಕೆ ಬನ್ನಿ ಎಂದು ಕರೆದಿದ್ದರಿಂದ ಇವರು ಕೂಡ ಆಗಸ್ಟ್ 14ರ ಸಂಜೆ ಮರಗೋಡಿಗೆ ಬಂದಿದ್ದರು. ಆಗಸ್ಟ್ 15 ರಂದು ಪೂಜೆ ಮುಗಿಸಿ ಬರುವಾಗ ಕತ್ತಾಲಾಗಿದ್ದರಿಂದ ಅಂದು ರಾತ್ರಿ ಅಲ್ಲಿಯೇ ಉಳಿದರು. ಮತ್ತೆ 16 ರಂದು ಮನೆಗೆ ಹೊರಟವರು ಅಲ್ಲಿ ಇಲ್ಲಿ ಬರೆ ಕುಸಿತವಾಗುತ್ತಿದೆ. ಜೋರು ಮಳೆ - ಗಾಳಿ ಇದೆ ಎಂದು ಅಕ್ಕ ಹೇಳಿದ್ದರಿಂದ ಅಂದು 16ರ ರಾತ್ರಿ ಕೂಡ ಅಲ್ಲಿಯೇ ಉಳಿದುಕೊಂಡರು. ಆದರೆ 16ರ ರಾತ್ರಿ ನಮ್ಮ ಹಾಲೇರಿ ನಾಡಿನವರಿಗೆ ಅದು ಮರೆಯಲಾಗದ ದುರ್ದಿನವಾಗಿಬಿಟ್ಟಿತು. ಆವತ್ತು ನಮ್ಮ ತೋಟ ಗದ್ದೆ ಎಲ್ಲವೂ ಕೂಡ ನೆಲಸಮವಾಗಿತ್ತು.

ನಾವು ಯಾರು ಕೂಡ ಆ ಮನೆಯಲ್ಲಿ ಇಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದೆವು. ಆದರೆ ನಾವು ಪ್ರೀತಿಯಿಂದ ಸಾಕಿದ ನಾಯಿಗಳು, ಹಸು ಕರುಗಳು, ಬೆಕ್ಕು ಎಲ್ಲವೂ ಅಲ್ಲೇ ಉಳಿಯುವಂತೆ ಆಯಿತು. ನಾವು ಹೇಗೋ ಪಾರಾಗಿದ್ದೆವು. ಆದರೆ ನಮ್ಮ ಮನಿಯಪ್ಪನ ಕುಟುಂಬದವರು ಊರಿನವರೂ, ನಾಡಿನವರೂ ಅಲ್ಲಿಯೇ ಸಿಕ್ಕಿ ಹಾಕಿಕೊಂಡು ಹೇಗೋ ಬೆಟ್ಟ ಗುಡ್ಡ ಹತ್ತಿ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಾಣವನ್ನು ಉಳಿಸಿಕೊಂಡು ಪರಿಹಾರ ಕೇಂದ್ರವನ್ನು ಸೇರಿಕೊಂಡರು. ಕಾವೇರಮ್ಮನ ನಾಡಿನಲ್ಲಿ ಇಷ್ಟೊಂದು ಭಯಾನಕವಾಗಿ ಗಿಡ, ಮರ, ಕಾಫಿ ತೋಟ, ಮನೆ ಗದ್ದೆಗಳ ಸಹಿತವಾಗಿ ನೆಲಸಮವಾಗುತ್ತದೆ ಎಂದು ಯಾರೊಬ್ಬರೂ ಕನಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ.

ಪ್ರೀತಿಯಿಂದ ಬೆಳೆಸಿದ ಗಿಡ ಮರಗಳು, ಕಾಫಿ ತೋಟ, ಗದ್ದೆಗಳು ಎಲ್ಲವೂ ಕೂಡ ಜಲಪ್ರಳಯಕ್ಕೆ ಸಿಲುಕಿ ಮರೆಯಾಗಿದೆ. ಇದೇನಾ ನಮ್ಮ ಮನೆ, ತೋಟ, ಗದ್ದೆ ಎಂದು ಆಶ್ಚರ್ಯ ಪಡುವಷ್ಟು ಬದಲಾವಣೆಯಾಗಿದೆ ಆ ಪರಿಸರ. ಮನೆಯ ಮುಂದೆ ದೊಡ್ಡ ದೊಡ್ಡ ಕಂದಕಗಳು ಸೃಷ್ಟಿಯಾಗಿವೆ. ಮತ್ತೆ ಜೀವನ ಅಲ್ಲಿ ನಡೆಸಲು ಸಾಧ್ಯವೇ ಇಲ್ಲದಂತಾಗಿದೆ. ಒಮ್ಮೆ ಆ ದೃಶ್ಯವನ್ನು ಕಣ್ಣಾರೆ ನೋಡಿದರೆ ಮೈಯಲ್ಲಿ ನಡುಕ ಹುಟ್ಟುತ್ತದೆ. ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ನಮ್ಮ ನಿಮ್ಮ ಜಾಗಗಳನ್ನು ಕಂಡು ಹಿಡಿಯಲಾರದಷ್ಟು ಬದಲಾವಣೆಗೊಂಡಿದೆ.

ನಮ್ಮ ಮನೆಯವರೆಲ್ಲರೂ ಕೂಡ ಕೃಷಿಯನ್ನೇ ಅವಲಂಬಿಸಿ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಕೃಷಿಯನ್ನು ಮಾಡೋಣವೆಂದರೆ ಗದ್ದೆ, ತೋಟಗಳೇ ಮಾಯವಾಗಿದೆ. ಆದ್ದರಿಂದ ನಿರಾಶ್ರಿತರ ಕುಟುಂಬದಲ್ಲಿರುವ ವಿದ್ಯಾವಂತರಿಗೆ ಉದ್ಯೋಗದ ಅವಶ್ಯಕತೆ ಮತ್ತು ಮೂಲಭೂತ ಸೌಕರ್ಯಗಳೊಂದಿಗೆ ವಸತಿಯ ಅವಶ್ಯಕತೆ ಇದೆ. ಎಲ್ಲವನ್ನೂ ಕಳೆದುಕೊಂಡು ಜೀವನವನ್ನು ಸಾಗಿಸುವದು ತುಂಬಾ ಕಷ್ಟ. ಆದ್ದರಿಂದ ಕೊಡಗಿನ ನಿರಾಶ್ರಿತರಿಗೆ ದಯವಿಟ್ಟು ಸಹಾಯ ಮಾಡಲು ಇಚ್ಚಿಸುವವರು ಸಹಾಯವನ್ನು ಮಾಡಿ ಪ್ರತಿಯೊಬ್ಬರೂ ಕೂಡ ಮೊದಲಿನ ಹಾಗೇ ಸುಂದರವಾದ ಬದುಕನ್ನು ರೂಪಿಸಿಕೊಳ್ಳುವಂತಾಗಲಿ. ಕಹಿ ಘಟನೆಗಳನ್ನು ಮರೆತು ಸಿಹಿಯಾದ ಜೀವನವನ್ನು ಸಾಗಿಸಲು ಪ್ರತಿಯೊಬ್ಬರಿಗೂ ಆ ದೇವರು ಶಕ್ತಿಯನ್ನು ಕೊಡಲಿ.

ಈ ಜಲ ಪ್ರಳಯದಿಂದಾಗಿ ಹಲವರು ವಯಸ್ಸಾದವರು ಹೃದಯಾಘಾತದಿಂದ ಪ್ರಾಣವನ್ನು ಬಿಟ್ಟಿದ್ದಾರೆ. ಬೆಟ್ಟ ಕುಸಿಯುತ್ತಿದ್ದ ಹಾಗೇ ಅದರಲ್ಲಿ ಸಿಲುಕಿಕೊಂಡಿದ್ದಾರೆ. ಬಾಣಂತಿಯರು ಏನೂ ಅರಿಯದ ಕಂದಮ್ಮಗಳು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೆಷ್ಟೋ ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ.

ಎಲ್ಲರನ್ನೂ ಕಳೆದುಕೊಂಡು ಅನಾಥರಾದವರೂ ಇದ್ದಾರೆ. ಇವರೆಲ್ಲರ ಜೀವನವು ಸುಗಮವಾಗಿ ಸಾಗಬೇಕಾದರೆ ಪ್ರತಿಯೊಬ್ಬರಿಗೂ ಉದ್ಯೋಗದ ಅವಶ್ಯಕತೆ ಇದೆ. ಎಲ್ಲರಿಗೂ ಸುಂದರ ಬದುಕನ್ನು ರೂಪಿಸಿಕೊಳ್ಳಲು ಆ ಭಗವಂತನು ಶಕ್ತಿಯನ್ನು ನೀಡಲಿ. ಇನ್ನು ಮುಂದೆ ಇಂತಹ ಕಹಿ ಘಟನೆಗಳು, ದುರಂತಗಳು ನಡೆಯದಿರಲಿ. ನಮ್ಮನ್ನೆಲ್ಲ ಕಾಪಾಡಿದ ಆ ಭಗವಂತನಿಗೆ ಕೋಟಿ ನಮನ.

- ಪಾಣತ್ತಲೆ ವಂದನಾ ರಂಜನ್, ಐಕೊಳ ಗ್ರಾಮ, ಮೂರ್ನಾಡು

.