ಗೋಣಿಕೊಪ್ಪ ವರದಿ, ಸೆ. 12 : ಗೋಣಿಕೊಪ್ಪ ದಿ ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಈ ಸಾಲಿನಲ್ಲಿ ರೂ. 43.75 ಲಕ್ಷ ಲಾಭದಲ್ಲಿದೆ ಎಂದು ಸೊಸೈಟಿಯ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ತಿಳಿಸಿದ್ದಾರೆ.

ನಷ್ಟದಲ್ಲಿದ್ದ ಸೊಸೈಟಿ ಹಲವು ವರ್ಷಗಳಿಂದ ಲಾಭದತ್ತ ಸಾಗುತ್ತಿರುವದು ಸೊಸೈಟಿಯ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬೆಳೆವಣಿಗೆ. ಸಾಲ ಮರುಪಾವತಿ ಕೂಡ ಶೇ. 90 ರಷ್ಟು ಬೆಳವಣಿಗೆಗೆ ಸಹಕಾರಿಯಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಿಗ್ಮಿ ಠೇವಣಿ, ಸಂಚಯ, ನಿರಖು, ವಿಶೇಷ ಹಾಗೂ ಇತರ ಠೇವಣಿಯಿಂದಾಗಿ 15.75 ಕೋಟಿ ಠೇವಣಾತಿ ಹೊಂದಿದೆ. ಕೆಡಿಸಿಸಿ ಬ್ಯಾಂಕ್‍ನಲ್ಲಿ 2 ಕೋಟಿ ನಿರಖು ಠೇವಣಿ ಹೊಂದಿದೆ. ಎಂದರು. ನಿರ್ವಹಣಾ ವೆಚ್ಚವಾಗಿ ಡಿಸಿಸಿ ಬ್ಯಾಂಕ್‍ನಿಂದ ಹಣ ಪಡೆಯದೇ ಲಾಭ ಪಡೆಯುತ್ತಿದೆ.

ಜಾಮೀನು ಸಾಲ, ಪಿಗ್ಮಿ, ನಗದು, ಓಡಿ, ಗಿರವಿ, ಆಭರಣ ಹಾಗೂ ಇತರ ಸಾಲಗಳಾಗಿ ರೂ. 14.04 ಕೋಟಿ ಸಾಲ ನೀಡಲಾಗಿದೆ. ಶೇ. 90 ರಷ್ಟು ಸಾಲ ಮರುಪಾವತಿಯಾಗಿದೆ.

806 ಸದಸ್ಯ ಬಲ ಹೊಂದಿರುವ ಸೊಸೈಟಿಯಲ್ಲಿ 41.13 ಲಕ್ಷ ಪಾಲು ಬಂಡವಾಳ ಹೊಂದಿದೆ. ವರ್ಷದಿಂದ ವರ್ಷಕ್ಕೆ ಲಾಭದ ಪ್ರಮಾಣ ಹೆಚ್ಚಾಗುತ್ತಿರುವದರಿಂದ ಈ ಬಾರಿ ಶೇ. 20 ರಷ್ಟು ಡಿವಿಡೆಂಡ್ ನೀಡಲಾಗುವದು ಎಂದರು.

ಗೋಣಿಕೊಪ್ಪ, ಶ್ರೀಮಂಗಲ ಹಾಗೂ ವೀರಾಜಪೇಟೆ ಸೇರಿದಂತೆ ಮೂರು ಶಾಖೆಗಳು ಸೊಸೈಟಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಿಗ್ಮಿ ಸಂಗ್ರಹದಿಂದ ಸೊಸೈಟಿ ಹೆಚ್ಚು ಲಾಭ ಪಡೆದುಕೊಳ್ಳುತ್ತಿದೆ. ಪ್ರತೀ ತಿಂಗಳಿಗೆ ಗೋಣಿಕೊಪ್ಪ ಶಾಖೆಗೆ 80-90 ಲಕ್ಷ, ವೀರಾಜಪೇಟೆಗೆ 50-60 ಲಕ್ಷ, ಶ್ರೀಮಂಗಲಕ್ಕೆ 20-30 ಲಕ್ಷ ಸಂಗ್ರಹವಾಗುತ್ತಿದೆ. ವೀರಾಜಪೇಟೆ, ಶ್ರೀಮಂಗಲ ಶಾಖೆಯಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದೆ. 29 ಪಿಗ್ಮಿ ಸಂಗ್ರಹಕಾರರು ದುಡಿಯುತ್ತಿದ್ದಾರೆ ಎಂದರು.

ಕಟ್ಟಡದಿಂದ ಬರುವ ಬಾಡಿಗೆ ಹಣವನ್ನು ಎಫ್‍ಡಿಯಾಗಿ 13 ಲಕ್ಷ ಇಡಲಾಗಿದೆ. ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರೋತ್ಸಾಹ ಧನ ನೀಡಲಾಗುವದು. ಅತೀವೃಷ್ಟಿಯಿಂದ ಸಂಕಷ್ಟದಲ್ಲಿ ರುವವರಿಗೆ ಸೊಸೈಟಿಯಿಂದ ರೂ. 50 ಸಾವಿರ ನೀಡಲು ನಿರ್ಧರಿಸಲಾಗಿದೆ. ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಮಹಾಸಭೆಯಲ್ಲಿ ಬೋಜನಕ್ಕೆ ಬಳಕೆಯಾಗುತ್ತಿದ್ದ ಹಣವನ್ನು ಸೇರಿಸಿ ನೀಡಲಾಗುವದು ಎಂದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಸುನಿಲ್ ಸುಬ್ರಮಣಿ, ನಿರ್ದೇಶಕ ಬಿ. ಎನ್. ಪ್ರಕಾಶ್, ಕಾರ್ಯದರ್ಶಿ ಶಿಲ್ಪ ಉಪಸ್ಥಿತರಿದ್ದರು.