ವೀರಾಜಪೇಟೆ, ಸೆ. 12: ಜಿಲ್ಲೆ ಪ್ರಕೃತಿ ವಿಕೋಪಕ್ಕೆ ತುತ್ತಾದ ಹಿನ್ನೆಲೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಪ್ರತಿವರ್ಷ ನಡೆಸುತ್ತಿದ್ದ ವಿಶ್ವಕರ್ಮ ಪೂಜೆ ಹಾಗೂ ಸಂಘದ ಮಹಾಸಭೆಯನ್ನು ವೀರಾಜಪೇಟೆ ಗಣಪತಿಗುಡಿಯ ಪ್ರಮತೋಷ ಸಭಾಂಗಣದಲ್ಲಿ ತಾ. 16 ರಂದು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಪಿ. ಲೋಕೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ವಿಶ್ವಕರ್ಮ ಮಹಾ ಪೂಜೆ ಹಾಗೂ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೆವು. ಈ ಬಾರಿ ಸರಳವಾಗಿ ಆಚರಿಸಲಾಗುವದು. ವಿಶ್ವಕರ್ಮ ಬಾಂಧವರ ವಿಶ್ವಾಸ ಪಾತ್ರವಾಗಿ ನಡೆಯುತ್ತಿರುವ ಸಂಘಟನೆಯಲ್ಲಿನ ಕೆಲವರು ಸಂಘದ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಿಶ್ವಕರ್ಮ ಮಹಾಪೂಜೆಗೆಂದು ಜನಾಂಗ ಬಾಂಧವರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡಿ ಸಂಘದ ನಕಲಿ ರಶೀತಿ ನೀಡುತ್ತಿರುವದು ಸಂಘದ ಗಮನಕ್ಕೆ ಬಂದಿದೆ. ಜನಾಂಗ ಬಾಂಧವರು ಅನಧಿಕೃತ ಹಣ ವಸೂಲಿಕೋರರ ವಿರುದ್ಧ ಎಚ್ಚರ ವಹಿಸುವಂತೆ ತಿಳಿಸಿದ್ದು, ಇಂತಹವರ ವಿರುದ್ಧ ಜಿಲ್ಲಾ ಸಂಘದವರಿಗೂ ದೂರು ನೀಡಲಾಗಿದೆ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಈಶ್ವರ್ ಆಚಾರ್ಯ, ಸಲಹೆಗಾರ ಚಂದ್ರಯ್ಯ ಆಚಾರ್ಯ, ನಿರ್ದೇಶಕ ಎ.ಪಿ. ದಾಮೋದರ್ ಆಚಾರ್ಯ ಉಪಸ್ಥಿತರಿದ್ದರು.