ಸೋಮವಾರಪೇಟೆ,ಸೆ.14: ಕಳೆದ ಆ. 16ರಿಂದ ಒಂದು ವಾರಗಳ ಕಾಲ ನಿರಂತರವಾಗಿ ಭೂಕುಸಿತಕ್ಕೆ ಒಳಗಾಗಿ ರಸ್ತೆಯೇ ಕಣ್ಮರೆಯಾಗಿರುವ ಸೋಮವಾರಪೇಟೆ-ಶಾಂತಳ್ಳಿ-ಕುಂದಳ್ಳಿ-ಮಾಗೇರಿ ರಸ್ತೆಯ ಕಾಮಗಾರಿ ಇಂದಿಗೂ ಆರಂಭ ವಾಗಿಲ್ಲ. ಆದರೂ ಬದಲಿ ಮಾರ್ಗದಲ್ಲಿ ಜೀಪ್, ಪಿಕಪ್ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಕುಂದಳ್ಳಿ-ಮಾಗೇರಿ ಮಾರ್ಗ ಮಧ್ಯೆ ಇರುವ ಹಿಜ್ಜನಳ್ಳಿ ಎಂಬಲ್ಲಿ ರಾಜ್ಯ ಹೆದ್ದಾರಿ ಸುಮಾರು 200 ಮೀಟರ್ಗೂ ಅಧಿಕ ಕುಸಿತಗೊಂಡಿದ್ದು, ಎಡಭಾಗದಲ್ಲಿದ್ದ ಬೆಟ್ಟ, ತೋಟ ಜಲಪ್ರಳಯಕ್ಕೆ ತುತ್ತಾಗಿ ಕೊಚ್ಚಿಕೊಂಡು ಹೋಗಿದೆ.
ಆ.16ರಿಂದಲೂ ಈ ರಸ್ತೆ ಬಂದ್ ಆಗಿದ್ದು, ಲೋಕೋಪಯೋಗಿ ಇಲಾಖಾ ಸಚಿವರು ಸೇರಿದಂತೆ ಇತರ ಸಚಿವರು, ಶಾಸಕರುಗಳು, ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿದ್ದರೂ ಸಹ ಇಂದಿಗೂ ಯಾವದೇ ಕಾಮಗಾರಿ ಆರಂಭವಾಗಿಲ್ಲ.
ಕೊಡಗು-ಹಾಸನ ಜಿಲ್ಲಾ ಗಡಿಯನ್ನು ಹೊಂದಿಕೊಂಡಿರುವ ಈ ಸ್ಥಳದಲ್ಲಿ ಭಾರೀ ಪ್ರಮಾಣದ ಭೂ ಕುಸಿತವಾದ ಹಿನ್ನೆಲೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಮಳೆ ಕಡಿಮೆಯಾಗಿರುವ ಹಿನ್ನೆಲೆ ಪಟ್ಲ ಗ್ರಾಮದ ಕುಮಾರ್ ಎಂಬವರ ತೋಟದ ಮೂಲಕ ಕಚ್ಚಾರಸ್ತೆಯನ್ನು ನಿರ್ಮಿಸಲಾಗಿದೆ.
ಕುಮಾರ್ ಅವರಿಗೆ ಸೇರಿದ ತೋಟವೂ ಸಹ ಭಾರೀ ಭೂಕುಸಿತಕ್ಕೆ ಕಣ್ಮರೆಯಾಗಿದ್ದು, ಉಳಿದಿರುವ ತೋಟದಲ್ಲಿದ್ದ ಕಾಫಿ ಗಿಡಗಳು, ಸಣ್ಣಪುಟ್ಟ ಮರಗಳನ್ನು ತೆರವುಗೊಳಿಸಿ, ಕಚ್ಚಾ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಪಿಕ್ಅಪ್, ಜೀಪ್ಗಳು ತೆರಳುತ್ತಿವೆ.