ಮಡಿಕೇರಿ, ಸೆ. 12: ತಾ. 13 ರಂದು (ಇಂದು) ಗೌರಿ ಮತ್ತು ಗಣೇಶ ಹಬ್ಬ ಹಾಗೂ ತಾ. 21 ರಂದು ಮೊಹರಂ ಕಡೇ ದಿನ, ಹೀಗೆ ಸಾಲು ಸಾಲು ಹಬ್ಬಗಳು ಇದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತ ಕೋರಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಕೋರಲಾಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆಣ್ಣೇಕರ್ ಅವರು ಗಣೇಶ ಚತುರ್ಥಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ 409 ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 7 ರವರೆಗೂ ಗಣೇಶ ಮೂರ್ತಿ ವಿಸರ್ಜನಾ ಕಾರ್ಯ ನಡೆಯಲಿದ್ದು, ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವಂತೆ ಮನವಿ ಮಾಡಿದರು.
ಸೆಪ್ಟೆಂಬರ್, 13 ರಂದೇ 156 ಕಡೆಗಳಲ್ಲಿ ಗಣೇಶ ವಿಸರ್ಜನಾ ಕಾರ್ಯ ಜರುಗಲಿದೆ. ಇಂತಹ ಸಮಯದಲ್ಲಿ ಯಾವದೇ ರೀತಿಯ ಶಾಂತಿ ಸುವ್ಯವಸ್ಥೆಗೆ ಭಂಗ ತರದಂತೆ ಎಚ್ಚರಿಕೆ ವಹಿಸುವದು ಸಂಬಂಧಪಟ್ಟವರದ್ದಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಲಾಗುತ್ತದೆ. ಅದೇ ರೀತಿ ವಿದ್ಯುತ್, ಅಗ್ನಿಶಾಮಕ ಇಲಾಖೆಗಳ ಗಮನಕ್ಕೆ ತರಬೇಕು. ಹಾಗೆಯೇ ಪೊಲೀಸ್ ಇಲಾಖೆಯಿಂದ ಎನ್.ಒ.ಸಿ. ನೀಡಲಾಗುತ್ತದೆ. ಇದನ್ನು ಪಾಲಿಸಬೇಕಿದೆ.
ಮೆರವಣಿಗೆ ಸಂದರ್ಭದಲ್ಲಿ ಸಾರಿಗೆ ಸಂಚಾರಕ್ಕೆ ಯಾವದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಾಲೆಂಟರ್ಸ್‍ಗಳನ್ನು ನಿಯೋಜಿಸಿಕೊಳ್ಳಬೇಕು. ಇವರಿಗೆ ಗುರುತಿನ ಚೀಟಿ ನೀಡಬೇಕು. ಸಾಧ್ಯವಿದ್ದಲ್ಲಿ ದೊಡ್ಡ ದೊಡ್ಡ ಪ್ರತಿಷ್ಠಾಪನೆ ಮಾಡುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಗಣೇಶ ಮೂರ್ತಿ ವಿಸರ್ಜನೆಗೆ ಸಾಗುವ ಮೆರವಣಿಗೆ ಬಗ್ಗೆ ಪೊಲೀಸ್ ಇಲಾಖೆಗೆ ಮೊದಲೇ ಮಾಹಿತಿ ನೀಡಿರಬೇಕು.
ಈಗಾಗಲೇ ಪೊಲೀಸ್ ಠಾಣಾ ಹಂತದಲ್ಲಿ ಹಾಗೂ ವಿಭಾಗ ಮಟ್ಟದಲ್ಲಿ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಲಾಗಿದ್ದು, ಎಲ್ಲರೂ ಶಾಂತಿಯುತವಾಗಿ ಹಾಗೂ ಸರಳವಾಗಿ ಆಚರಿಸಲಾಗುವದು ಎಂದು ತಿಳಿಸಿದ್ದಾರೆ. ಅದರಂತೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಸುಮನ್ ಡಿ.ಪೆಣ್ಣೇಕರ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರೊಬ್ಬರು ಮೊಹರಂ ಕಡೇ ದಿನ 21 ಕ್ಕೆ ಇದ್ದು, ಇಂದಿನಿಂದಲೇ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲಾಗುತ್ತದೆ. ಮೆರವಣಿಗೆ ಇರುವದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎಲ್ಲಾ ಸಮಾಜದವರು, ಎಲ್ಲಾ ಧಾರ್ಮಿಕ ಮುಖಂಡರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದೀರಿ, ಹಾಗೆಯೇ ಹಬ್ಬ ಹರಿದಿನಗಳಲ್ಲಿಯೂ ಶಾಂತಿ ಸುವ್ಯವಸ್ಥೆಗೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದರು.
ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು. ಯಾರೂ ಸಹ ಪ್ಲಾಸ್ಟಿಕ್‍ನ್ನು ಬಳಸುವಂತಿಲ್ಲ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ವಾಲೆಂಟರ್ಸ್‍ಗಳನ್ನು ನಿಯೋಜಿಸಿಕೊಳ್ಳಬೇಕು. ರಕ್ಷಣೆ ಸಂಬಂಧ ಗಮನ ಹರಿಸಬೇಕು. ಯಾವದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಮಾಡಬೇಡಿ ಎಂದು ಕೋರಿದರು.
ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ಸ್ವಚ್ಛತೆ ಕಡೆ ಗಮನಹರಿಸಬೇಕು. ಡಸ್ಟ್‍ಬಿನ್‍ಗಳನ್ನು ಬಳಸಬೇಕು. ಶುದ್ಧ ಕುಡಿಯುವ ನೀರು ಬಳಸಬೇಕು. ಸ್ವಚ್ಛತೆ ಮತ್ತಿತರ ಸಂಬಂಧ ಗ್ರಾ.ಪಂ.ಪಿಡಿಓಗಳ ಗಮನಕ್ಕೆ ಮೊದಲೇ ತಂದಿರಬೇಕು ಎಂದರು.
ವೀರಾಜಪೇಟೆ ತಾಲೂಕಿನ ಪ್ರತಿನಿಧಿಯೊಬ್ಬರು ಹುದಿಕೇರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬೀದಿ ದೀಪ ಅಳವಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.ಹೆಚ್ಚವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಂದರ್‍ರಾಜ್, ನಾಗಪ್ಪ, ಪುರುಷೋತ್ತಮ, ಧಾರ್ಮಿಕ ಮುಖಂಡರು, ಸಮಾಜದ ಪ್ರತಿನಿಧಿಗಳು ಇತರರು ಇದ್ದರು.